ನ್ಯೂಸ್ ನಾಟೌಟ್: ಬಹಳ ಸಮಯದ ಬಳಿಕ ಮನೆಗೆ ತೆರಳಿ ಹೊಸ ಮನೆಯ ಗೃಹಪ್ರವೇಶದ ಕನಸುಕಂಡಿದ್ದ ಯೋಧ ಭಯೋತ್ಪಾದಕರ ದಾಳಿಗೆ ಕೊನೆಯುಸಿರೆಳೆದಿದ್ದ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಎನ್ಕೌಂಟರ್ನಲ್ಲಿ ಹುತಾತ್ಮರಾದ ಮೇಜರ್ ಆಶಿಶ್ ಧೋಂಚಕ್ ನಿವಾಸದಲ್ಲಿ ದುಃಖ ಮಡುಗಟ್ಟಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಎನ್ಕೌಂಟರ್ನಲ್ಲಿ 19 ರಾಷ್ಟ್ರೀಯ ರೈಫಲ್ಸ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್ಪ್ರೀತ್ ಸಿಂಗ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಭಟ್ ಕೂಡಾ ಹುತಾತ್ಮರಾಗಿದ್ದಾರೆ.
ಶನಿವಾರ ಟಿಡಿಐ ಸಿಟಿಯಲ್ಲಿರುವ ಹೊಸ ಮನೆಯ ಗೃಹಪ್ರವೇಶಕ್ಕೆ ಮೇಜರ್ ಆಶಿಶ್ ಬರಬೇಕಿತ್ತು. ಹೊಸ ಮನೆ ಮತ್ತು ಬಹಳ ಕಾಲದ ನಂತರ ಗ್ರಾಮಕ್ಕೆ ಮನೆ ಮಗ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಾಗರಣ ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು ಎಂದು ಶಹೀದ್ ಮೇಜರ್ ಅವರ ಭಾಮೈದ ಸುರೇಶ್ ತಿಳಿಸಿದ್ದಾರೆ.
ಅಕ್ಟೋಬರ್ 23 ರಂದು ಆಶಿಶ್ ಜನ್ಮದಿನವೂ ಇತ್ತು.
ಬಹಳ ಸಮಯದ ನಂತರ ಆಶಿಶ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಆಗಮದ ಬಗ್ಗೆ ಮನೆ ಮಂದಿ ಹೊಸ ಉತ್ಸಾಹದಲ್ಲಿದ್ದರು. ಹೊಸ ಮನೆ, ಮಗನ ಆಗಮನ ಹೀಗೆಅಲ್ಲಿ ಸಂತಸ ಮನೆ ಮಾಡಿತ್ತು. ಆದರೆ ಹೊಸ ಮನೆಗೆ ಮನೆ ಮಗನ ಬದಲು ಅವರ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳುವ ಸನ್ನಿವೇಶ ಎದುರಾಗಿದೆ. ಈ ಮಧ್ಯೆ ಹುತಾತ್ಮರ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಮೇಜರ್ ಆಶಿಶ್ ಅವರ ಚಿಕ್ಕಪ್ಪ ಹೇಳಿದ್ದಾರೆ.
ಮೇಜರ್ ಆಶಿಶ್ ಅವರ ಪಾರ್ಥಿವ ಶರೀರವನ್ನು 3 ರಿಂದ 4 ಗಂಟೆಗೆ ತರಲಾಗುವುದು. ಅವರ ಅಂತಿಮ ವಿಧಿಗಳನ್ನು ಅವರ ಬಿಂಜೌಲ್ನಲ್ಲಿ ನಡೆಸಲಾಗುವುದು. ಆದರೆ ಅದಕ್ಕೂ ಮೊದಲು ಅವರ ಪಾರ್ಥಿವ ಶರೀರವನ್ನು ಹೊಸದಾಗಿ ನಿರ್ಮಾಣವಾಗಿರುವ ಮನೆಗೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಗರೋಲ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಮಂಗಳವಾರ ಸಂಜೆ ಪ್ರಾರಂಭವಾಯಿತು. ಆದರೆ ರಾತ್ರಿ ವೇಳೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಅಡಗುತಾಣವೊಂದರಲ್ಲಿ ಭಯೋತ್ಪಾದಕರು ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಪಡೆದ ನಂತರ ಬುಧವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ನಡೆಸಲಾಗಿತ್ತು.
ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣ: ಸ್ವಾಮೀಜಿ ಬಂಧನದ ಸುಳಿವು ಕೊಟ್ಟರಾ ಗೃಹಸಚಿವ?
ತನ್ನ ತಂಡವನ್ನು ಮುನ್ನಡೆಸುತ್ತಿದ್ದ ಕರ್ನಲ್ ಸಿಂಗ್ ಭಯೋತ್ಪಾದಕರ ಮೇಲೆ ದಾಳಿ ಮಾಡಿದರು. ಆದರೆ, ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಧೋನಕ್ ಮತ್ತು ಭಟ್ ಅವರಿಗೂ ಗುಂಡುಗಳು ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ವೇಳೆ, ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಗುಂಪು ನಿಷೇಧಿತ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎನ್ನಲಾಗಿದೆ.