ನ್ಯೂಸ್ ನಾಟೌಟ್ : ನಾವು ಕಾರು ಬೈಕ್ ಆಟೋ ಮುಂತಾದ ವಾಹನಗಳನ್ನು ಕದಿಯುವುದನ್ನು ನೋಡಿರಬಹುದು ಕೇಳಿರಬಹುದು, ಆದರೆ ನೆರೆಯ ತೆಲಂಗಾಣದಲ್ಲಿ ಓರ್ವ ಸರ್ಕಾರಿ ಬಸ್ಸನೇ ಕದ್ದಿರುವ ಘಟನೆ ನಡೆದಿದೆ.
ತೆಲಂಗಾಣದ ಹೈದರಾಬಾದ್ನ ಸಿದ್ದಿಪೇಟ್ ಬಳಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ (TSRTC) ಇಲಾಖೆಗೆ ಸೇರಿದ ಸಿಬ್ಬಂದಿಯಂತೆ ವರ್ತಿಸಿದ ಈತನಿಗೆ ವಾಹನ ಚಾಲನೆ ಗೊತ್ತಿತ್ತು. ಹೀಗಾಗಿ ಈತ ಸಿದ್ದಿಪೇಟೆ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಸಿಬ್ಬಂದಿ ನಿಲ್ಲಿಸಿ ಹೋಗಿದ್ದ ಬಸ್ಸನ್ನು ಅಲ್ಲಿಂದ ಕದ್ದೊಯ್ದಿದ್ದಾನೆ. ನಂತರ ಆತ ಅದನ್ನು ಚಾಲನೆ ಮಾಡಿಕೊಂಡು ಹೋಗಿದ್ದು, ಬಸ್ಗೆ ಹತ್ತಿದವರಿಂದೆಲ್ಲಾ ಹಣ ವಸೂಲಿ ಮಾಡಿದ್ದಾನೆ. ಆದರೆ ಮಾರ್ಗಮಧ್ಯೆ ಡೀಸೆಲ್ ಖಾಲಿ ಆಗಿ ಬಸ್ ನಿಂತು ಹೋಗಿದ್ದು, ಈ ವೇಳೆ ಬಸ್ ನ್ನು ಅದರಲ್ಲಿದ್ದ ಪ್ರಯಾಣಿಕರನ್ನು (Passengers) ಮಾರ್ಗಮಧ್ಯೆಯೇ ಬಿಟ್ಟು ಈತ ಪರಾರಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.
ಇದಕ್ಕೂ ಮೊದಲು ಆತ ಬಸ್ನ್ನು ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದು, ಅಲ್ಲಿದ್ದ ಕೆಲ ಪ್ರಯಾಣಿಕರಿಗೆ ಈ ಬಸ್ ಹೈದರಾಬಾದ್ಗೆ ತೆರಳುತ್ತಿರುವುದಾಗಿ ಹೇಳಿದ್ದಾನೆ. ಹೀಗಾಗಿ ಹೈದರಾಬಾದ್ ತೆರಳುವುದಕ್ಕಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದವರೆಲ್ಲಾ ಈ ಬಸ್ಸನ್ನು ಏರಿದ್ದಾರೆ. ನಂತರ ಈತನೂ ಬಸ್ ಏರಿದ್ದು, ಬಸ್ ಸ್ಟಾರ್ಟ್ ಮಾಡಿದ್ದಾನೆ. ಈ ವೇಳೆ ಕೆಲವು ಪ್ರಯಾಣಿಕರು ಕಂಡೆಕ್ಟರ್ ಎಲ್ಲಿ ಎಂದು ಕೇಳಿದ್ದಾರೆ.
ಈ ವೇಳೆ ಆತ ಪ್ರಯಾಣದ ಮಧ್ಯೆ ಕಂಡಕ್ಟರ್ ಬಂದು ಸೇರಿಕೊಳ್ಳಲಿದ್ದಾನೆ ಎಂದು ಹೇಳಿದ್ದಾನೆ. ಆದರೆ ಚಾಲಕನ ಎರ್ರಾಬಿರಿ ಚಾಲನೆಯಿಂದಾಗಿ ಪ್ರಯಾಣಿಕರಿಗೆ ಆತನ ಮೇಲೆ ಮತ್ತಷ್ಟು ಅನುಮಾನ ಹೆಚ್ಚಾಗಿದೆ ಮತ್ತೆ ಪ್ರಶ್ನಿಸಿದ್ದಾರೆ.
ಈ ಮಧ್ಯೆ ಬಸ್ ಸಿರ್ಸಿಲ್ಲಾ ಜಿಲ್ಲೆಯ ಜಿಲ್ಲೆಲ್ಲಾ ಕ್ರಾಸ್ ರೋಡ್ ತಲುಪಿದ್ದು, ಅಷ್ಟರಲ್ಲಿ ಬಸ್ನ ಇಂಧನ ಖಾಲಿಯಾಗಿ ಬಸ್ ಮಧ್ಯದಲ್ಲೇ ನಿಲುಗಡೆಯಾಗಿದೆ. ಈ ವೇಳೆ ಪ್ರಯಾಣಿಕರು ಏನಾಯಿತು ಎಂದು ಅರಿಯುವ ಮೊದಲೇ ಆತ ಬಸ್ನಿಂದ ಇಳಿದು ಸ್ಥಳದಿಂದ ಓಡಿದ್ದಾನೆ.
ಈ ಮಧ್ಯೆ ವಿಚಾರ ತಿಳಿದ ಸಿದ್ದಿಪೇಟೆ (Siddipet) ಟಿಆರ್ಟಿಎಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಬಸ್ನಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದ ಫೋಟೋ ವೀಡಿಯೋ ಆಧರಿಸಿ ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.