ನ್ಯೂಸ್ ನಾಟೌಟ್ : ಶ್ರೀಮಂತರಿಗಾದರೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು.ಆದರೆ ಬಡವರು ಒಂದು ವಸ್ತು ಖರೀದಿಸುವಾಗಲೂ ಯೋಚನೆ ಮಾಡುತ್ತಾರೆ. ಅದ್ರಲ್ಲೂ ಐಫೋನ್ ಅನ್ನುವಂಥದ್ದು ಬಡವರಿಗೆ ಗಗನಕುಸುಮ.ಬಹುತೇಕರ ಕನಸ್ಸಿದ್ದರೂ ಲಕ್ಷಗಟ್ಟಲೇ ರೇಟ್ ಇರೋದ್ರಿಂದ ಅದು ಅಸಾಧ್ಯ.ಆದರೆ ನೀವಿಲ್ಲಿ ಕೇವಲ ೭೦೦ ರೂ.ಗೆ ಐಫೋನ್ ಖರೀದಿಸಬಹುದು..!
ಹೌದು, ನಿಮಗಿಷ್ಟವಾದ ಮೊಬೈಲ್ ಖರೀದಿಗೆಂದೇ ಜಾಲವೊಂದು ಮೈಸೂರು ನಗರದ ಬೋಗಾದಿ ರಸ್ತೆಯಲ್ಲಿ ಹೊಸದಾಗಿ ಹುಟ್ಟಿಕೊಂಡಿದೆ. ಅಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳಾದ ಮೊಬೈಲ್, ಸ್ಮಾರ್ಟ್ ವಾಚ್ ಇತ್ಯಾದಿಗಳನ್ನು ಸುಮಾರು ಹತ್ತಾರು ಯುವಕರು ತಂದು ಫುಟ್ ಪಾತ್ ಮೇಲಿಟ್ಟು ಮಾರುತ್ತಿದ್ದಾರೆ. ಅದೂ ಸಹ ಕಡಿಮೆ ರೇಟ್ ನಲ್ಲಿ ಅನ್ನೋದು ವಿಶೇಷ..!
ಖಾಸಗಿ ಜಾಲತಾಣವೊಂದರ ವರದಿಯ ಪ್ರಕಾರ, ಈ ಉಪಕರಣಗಳಿಗೆ ಹಣ ಎಷ್ಟು ಕಡಿಮೆಯೆಂದರೆ ನೀವೂ ಸಹ ಒಂದು ಕ್ಷಣ ಬೆರಗಾಗ್ತೀರಿ.ಉದಾಹರಣೆಗೆ, ಒಂದು ಆ್ಯಪಲ್ ಫೋನಿನ ಬೆಲೆ 60 ಸಾವಿರ ರೂ.ಗಳಿಂದ 1.50 ಲಕ್ಷ ರೂ.ಗಳವರೆಗೆ ಇರುತ್ತದಲ್ಲವೇ? ಆದರೆ, ಬೋಗಾದಿ ರಸ್ತೆಯಲ್ಲಿರುವ ಭರ್ಜರಿ ಸೇಲ್ ನಲ್ಲಿ ನಿಮಗೆ ಅದೇ ಆ್ಯಪಲ್ ಬ್ರ್ಯಾಂಡ್ ನ ಲೋಗೋ ಇರುವ ಫೋನ್ ಕೇವಲ 700 ರೂ.ಗಳಿಗೆ ಸಿಗುತ್ತೆ! ಇವಿಷ್ಟು ಮಾತ್ರವಲ್ಲ. ಫಾಸ್ಟ್ ಟ್ರ್ಯಾಕ್ ಕಂಪನಿಯ ಸ್ಮಾರ್ಟ್ ವಾಚ್ ಕೂಡ 200 ರೂ.ಗಳಿಂದ 300 ರೂ.ವರೆಗೆ ಕೈಗೆಟುಕುವ ದರದಲ್ಲಿ ಲಭ್ಯವಿದೆ.
ಅಂದಹಾಗೆ,ಇದನ್ನು ನೋಡುವಾಗ ಇವರು ಯಾರು? ಎಲ್ಲಿಯವರು ಎಂಬ ಪ್ರಶ್ನೆ ನಮ್ಮನ್ನು ಕಾಡದಿರದು. ಇವರು ಹುಬ್ಬಳ್ಳಿ ಮೂಲದವರೆಂದು ಹೇಳಲಾಗಿದ್ದು, ಸುಮಾರು 10 ಮಂದಿ ಈ ಕೆಲಸಕ್ಕೆ ಇಳಿದಿದ್ದಾರೆ. ಬೋಗಾದಿ ರಸ್ತೆಯಲ್ಲೇ ನಾಲ್ಕು ಗುಂಪುಗಳಾಗಿ ವಿಭಜನೆಗೊಂಡು, ಈ ವೃತ್ತಿಯಲ್ಲಿ ತೊಡಗಿದ್ದಾರೆ. ತಮ್ಮ ಮುಂದೆ ತಾವು ತಂದಿರುವ ಈ ಎಲ್ಲಾ ವಸ್ತುಗಳನ್ನಿಟ್ಟುಕೊಂಡು ಕುಳಿತು ವ್ಯಾಪಾರ ಮಾಡುತ್ತಿದ್ದಾರೆ.
ಇದು ಒರಿಜಿನಲ್ಲಾ ಎಂದು ಪ್ರಶ್ನೆ ಮಾಡಿದರೆ, ಇಲ್ಲ… ಇದು ಒರಿಜಿನಲ್ ಅಲ್ಲ, ಇದು ಆಯಾ ಗ್ಯಾಡ್ಜೆಟ್ ಮೇಲೆ ಹಾಕಲಾಗಿರುವ ಬ್ರ್ಯಾಂಡ್ ನ ನಕಲು ಅಂತ ನೇರವಾಗಿಯೇ ಹೇಳುತ್ತಾರೆ.ಅವರು ಹೀಗೆ ಹೇಳಿದರೂ, ಎಷ್ಟು ದಿನ ಬಾಳಿಕೆ ಬಂದ್ರೂ ಸರಿ, ನನ್ನ ಹತ್ರ ಇಂಥ ಕಾಸ್ಟ್ಲಿ ಗ್ಯಾಡ್ಜೆಟ್ ಪ್ರತಿಷ್ಠೆಗೋಸ್ಕರವಾದ್ರೂ ಒಂದು ಇರ್ಲಿ ಅಂತೇಳಿ ಈ ಸಾಮಗ್ರಿಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ. ಹಾಗಾಗಿ, ಇಲ್ಲಿ ಭರ್ಜರಿ ಸೇಲ್ ಆಗುತ್ತಿದೆ! ಇಷ್ಟು ಹೇಳಿದ ಮೇಲೆ, ನಿಮಗೆ ಕೊಂಡುಕೊಳ್ಳಬೇಕು ಮನಸ್ಸಾದರೆ ನಿಮ್ಮಿಷ್ಟ..