ನ್ಯೂಸ್ ನಾಟೌಟ್ : ಹಿಂದೂಧರ್ಮದಲ್ಲಿ ಹಾವಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ.ಅದರಲ್ಲೂ ತುಳುನಾಡಿನಲ್ಲಿ ದೈವರಾಧನೆ ,ನಾಗಾರಾಧನೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಹೀಗಾಗಿ ಹಾವುಗಳಿಗೆ ಅಪ್ಪಿತಪ್ಪಿಯೂ ಹಾನಿ ಮಾಡಬಾರದು ಇದರಿಂದ ದೋಷ ಸುತ್ತಿಕೊಳ್ಳುತ್ತದೆ ಎಂದು ನಂಬಲಾಗಿದೆ.ಒಂದು ವೇಳೆ ನೋವು ಮಾಡಿದರೆ ಈ ದೋಷ ಮುಂದಿನ ತಲೆಮಾರುಗಳವರೆಗೂ ಮುಂದುವರಿಯುತ್ತದೆ ಎಂದು ಹೇಳಲಾಗಿದೆ.
ಇಲ್ಲೊಬ್ಬ ವ್ಯಕ್ತಿ ನಾಗರಹಾವಿಗೆ ಡೀಸೆಲ್ ಎರಚಿದ ಘಟನೆ ಒಂದು ವಾರಗಳ ಹಿಂದೆ ನಡೆದಿದ್ದು,ಇದೀಗ ಆತ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಎಂಬಲ್ಲಿ ನಡೆದಿದೆ.
ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದ ವಾರ ನಾಗರ ಹಾವೊಂದು ಕಂಡುಬಂದಿತ್ತು.ಇದನ್ನು ಕಂಡ ಆ ವ್ಯಕ್ತಿ ಗಾಬರಿಯಾಗಿದ್ದಾನೆ. ಈ ವೇಳೆ ಕಟ್ಟಡದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಈತ (ಉತ್ತರ ಕರ್ನಾಟಕ ಮೂಲದ ವ್ಯಕ್ತಿ) ನಾಗರ ಹಾವಿಗೆ ಡೀಸೆಲ್ ಎರಚಿದ್ದ ಎನ್ನಲಾಗಿದೆ.ಇದರಿಂದಾಗಿ ಉರಿ ತಡೆದುಕೊಳ್ಳಲಾಗದೇ ನಾಗರ ಹಾವು ಭಾರಿ ಯಾತನೆ ಅನುಭವಿಸಿತ್ತು.
ಕೂಡಲೇ ಸ್ಥಳೀಯರ ಗಮನಕ್ಕೆ ಇದು ಬಂದಿದ್ದು,ಸ್ಥಳೀಯರು ಇದನ್ನು ಕಂಡು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ನಾಗರ ಹಾವಿನ ಆ ಪರಿಸ್ಥಿತಿ ಕಂಡು ಒಂದು ನಿಮಿಷವನ್ನೂ ವೇಸ್ಟ್ ಮಾಡದೇ ಹಾವನ್ನು ರಕ್ಷಣೆ ಮಾಡಿದ್ದಾರೆ. ಹಾವಿನ ಮೈಯನ್ನು ಶ್ಯಾಂಪ್ ಮೂಲಕ ತೊಳೆದು ಕಾಪಾಡಿದ್ದಾರೆ.ಕೆಲ ಕ್ಷಣಗಳಲ್ಲಿ ಹಾವು ಸಹಜ ಸ್ಥಿತಿಗೆ ಬಂದಿದೆ.ಅದು ಚೇತರಿಸಿಕೊಂಡ ಬಳಿಕ ಆನಂತರ ಕಾಡಿಗೆ ಬಿಟ್ಟಿದ್ದಾರೆ.
ಸದ್ಯ ನಾಗರ ಹಾವಿಗೆ ಡಿಸೇಲ್ ಎರಚಿದ ವ್ಯಕ್ತಿ ಒಂದು ವಾರ ಕಳೆಯುವಷ್ಟರಲ್ಲಿ ಹಾಸ್ಪಿಟಲ್ ಸೇರಿದ ಘಟನೆ ನಡೆದಿದೆ. ಆತ ನಾಗರ ಹಾವಿನಂತೆ ಮೈಉರಿಯಿಂದ ಬಳಲಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದ್ದು ,ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾನೆ.