ನ್ಯೂಸ್ ನಾಟೌಟ್ : ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನಕ್ಕೆ ಚೀನಾ ಹೊಸ ರಾಯಭಾರಿಯನ್ನು ನೇಮಿಸಿದ್ದು ಈಗ ಭಾರಿ ಚರ್ಚೆಗೆ ಕಾರನವಾಗಿದೆ. ತಾಲಿಬಾನ್ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಜಗತ್ತಿನ ಮೊದಲ ರಾಷ್ಟ್ರವಾಗಿ ಚೀನಾ ಎನ್ನಲಾಗಿದ್ದು, ಬೇರೆ ಯಾವ ರಾಷ್ಟ್ರಗಳೂ ಈ ಹಿಂದೆ ಈ ನಿರ್ಧಾರ ತೆಗೆದುಕೊಂಡಿಲ್ಲ.
ಈ ನಿರ್ಧಾರ ಹಿಂದೆ ರಾಜಕೀಯ ಕುತಂತ್ರಗಳಿರ ಬಹುದೇ ಎಂಬ ಅನುಮಾನ ಉಂಟಾಗಿದ್ದು, ಭಾರತ ಮತ್ತು ನೆರೆಯ ರಾಷ್ಟ್ರಗಳಿಗೆ ಅಭದ್ರತೆ ಸೃಷ್ಟಿಸಲು ಈ ಯೋಜನೆ ಹಾಕಿಕೊಂಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.
2021 ರಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್ಗೆ ರಾಯಭಾರಿಯೊಬ್ಬರಿಗೆ ಇಂತಹ ಅದ್ದೂರಿ ಸ್ವಾಗತ ನೀಡಿರುವುದು ಇದೇ ಮೊದಲು. ಹೊಸ ರಾಯಭಾರಿಯ ಆಗಮನವು ಇತರ ರಾಷ್ಟ್ರಗಳು ಮುಂದೆ ಬರಲು ಮತ್ತು ತಾಲಿಬಾನ್ ನೇತೃತ್ವದ ಸರ್ಕಾರದೊಂದಿಗೆ ಸಂಬಂಧ ಸ್ಥಾಪಿಸುವ ಸಂಕೇತವಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಚೀನಾ ರಾಯಭಾರಿ ಝಾವೋ ಎಂಬವರಿಗೆ ಅಫ್ಘಾನ್ ಸೈನಿಕರು ಸ್ವಾಗತ ಕೋರಿದ್ದು, ಆಡಳಿತದ ಮುಖ್ಯಸ್ಥರಾದ ಮೊಹಮ್ಮದ್ ಹಸನ್ ಅಖುಂಡ್ ಮತ್ತು ವಿದೇಶಾಂಗ ಸಚಿವ ಮುತಾಕಿ ಸೇರಿದಂತೆ ಉನ್ನತ ಶ್ರೇಣಿಯ ತಾಲಿಬಾನ್ ಅಧಿಕಾರಿಗಳನ್ನು ರಾಯಭಾರಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಚೀನಾ ಮತ್ತು ಅಫ್ಘಾನಿಸ್ತಾನದ ನಡುವೆ ಮಾತುಕತೆ, ಸಹಕಾರವನ್ನು ಮುಂದುವರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದ್ದು, ಅಫ್ಘಾನಿಸ್ತಾನದ ಬಗ್ಗೆ ಚೀನಾದ ನೀತಿ ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ಹೇಳಿಕೊಂಡಿದೆ.