ನ್ಯೂಸ್ ನಾಟೌಟ್: ಮನೆ ಮುಂದೆ ಆಟವಾಡುತ್ತಾ ಇದ್ದ ಮಕ್ಕಳು ಸಕ್ಕರೆ ಎಂದು ಡ್ರೈನೇಜ್ ಕ್ಲೀನರ್ ಪುಡಿಯನ್ನು ತಿಂದು ಆಸ್ಪತ್ರೆ ಸೇರಿರುವ ಪ್ರಕರಣ ಬೆಂಗಳೂರು ದೇವನಹಳ್ಳಿಯಿಂದ ವರದಿಯಾಗಿದೆ. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ದೇವನಹಳ್ಳಿ ಪಟ್ಟಣದ ವಿನಾಯಕ ನಗರದಲ್ಲಿ ಮೂವರು ಪುಟ್ಟ ಕಂದಮ್ಮಗಳು (Three Children) ಮನೆ ಎದುರಿನ ರಸ್ತೆಯಲ್ಲಿ ಆಟವಾಡುತ್ತಿದ್ದರು. ಮಕ್ಕಳನ್ನು ಜತೆಯಾಗಿ ಬಿಟ್ಟು ಅವರ ಅಮ್ಮಂದಿರು ಕೆಲಸಕ್ಕೆ ಹೋಗಿದ್ದರು. ಆಗ ಅವರ ಕೈಗೆ ಒಂದು ಪ್ಯಾಕೆಟ್ ಸಿಕ್ಕಿದೆ. ಅದು ಬಿಳಿ ಸಕ್ಕರೆಯಂತೆ ಇದ್ದು, ಮಕ್ಕಳು ಆಸೆಯಿಂದ ತಿಂದಿವೆ. ಕೂಡಲೇ ಅಸ್ವಸ್ಥಗೊಂಡ ಅವರನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಚಿತ್ರಾ (3), ಲೋಹಿತ್ಯಾ (4), ವೇದಾಂತ (3) ವಿಷ ಸೇವನೆಯಿಂದ ಅಸ್ವಸ್ಥರಾದ ಮಕ್ಕಳು. ಇವರು ಅಕ್ಕಪಕ್ಕದ ಮನೆಯವರಾಗಿದ್ದು, ಜತೆಯಾಗಿ ಆಡುತ್ತಿದ್ದರು. ಆಗ ಅವರಿಗೆ ಡಿ ಕ್ಲಾಗ್ (D-Klog) ಎನ್ನುವ ಡ್ರೈನೇಜ್ ಕ್ಲೀನರ್ ಕಾಣಿಸಿದೆ. ಅದನ್ನು ಸಕ್ಕರೆ ಎಂದು ತಪ್ಪು ತಿಳಿದುಕೊಂಡು ಮಕ್ಕಳು ತಿಂದಿದ್ದಾರೆ. ಹಾಗೆ ತಿಂದ ಮಕ್ಕಳು ಸ್ವಲ್ಪ ಹೊತ್ತಿನಲ್ಲೇ ಅಸ್ವಸ್ಥರಾಗಿದ್ದಾರೆ.
ಕೂಡಲೇ ಅವರನ್ನು ದೇವನಹಳ್ಳಿಯ ಆಕಾಶ್ ಆಸ್ವತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.