ನ್ಯೂಸ್ ನಾಟೌಟ್ : ಚಿಕ್ಕಮಗಳೂರಿನಲ್ಲಿ (Chikkamagaluru News) ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇನ್ನೇನು ಬಸ್ ಬಂದೇ ಬಿಡ್ತು ಬೇಗ ಸ್ಕೂಲ್ ತಲುಪಬೇಕು ಎಂದು ಕಾದು ಕುಳಿತಿದ್ದ ಮಕ್ಕಳ ಮೇಲೆಯೇ ಬಸ್ ಹರಿದೇ ಬಿಟ್ಟಿದೆ.ವೀಪರೀತ ವೇಗದಲ್ಲಿದ್ದ ಬಸ್ನಡಿಗೆ ಮಕ್ಕಳು ಸಿಲುಕಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್ನಲ್ಲಿ ಈ ದುರಂತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಮಕ್ಕಳು ಮತ್ತು ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಎಂದಿನಂತೆ ಮಕ್ಕಳು ಭಾರಿ ಉತ್ಸಾಹದಿಂದ ಶಾಲೆ ಹೋಗೋದಕ್ಕೆ ರೆಡಿಯಾಗಿದ್ದರು.ಹೀಗಾಗಿ ಬಸ್ ನಿಲ್ದಾಣದ ಬಳಿ ನಿಂತಿದ್ದರು.ಸ್ವಲ್ಪ ಸಮಯದಲ್ಲೇ ನೋಡ ನೋಡುತ್ತಿದ್ದಂತೆ ಬಸ್ ಮಕ್ಕಳ ಮೇಲೆಯೇ ನುಗ್ಗಿದೆ. ಎಂಡಿಎಸ್ ಎಂಡ್ ಸನ್ಸ್ ಕಂಪನಿಗೆ ಸೇರಿದ ಖಾಸಗಿ ಬಸ್ ಇದಾಗಿದ್ದು,ಕ್ಷಣದಲ್ಲೇ ಯಾರೂ ಏನೂ ಮಾಡುವ ಪರಿಸ್ಥಿತಿಯೂ ಇರಲಿಲ್ಲ.ಆದರೆ, ಅತಿಯಾದ ವೇಗದಲ್ಲಿದ್ದ ಪರಿಣಾಮವಾಗಿ ನಿಯಂತ್ರಣ ಸಿಗದೇ ಮಕ್ಕಳ ಎದುರು ನಿಲ್ಲಬೇಕಾಗಿದ್ದ ಬಸ್ ಅವರ ಮೇಲೆಯೇ ಹರಿದು ಹಲವರು ಗಾಯಗೊಳ್ಳುವಂತೆ ಮಾಡಿದೆ.
ಮಾತ್ರವಲ್ಲ ಈ ಬಸ್ ಪಕ್ಕದ ಮನೆಗಳತ್ತ ಧಾವಿಸಿದ್ದು ಡಿಕ್ಕಿಯ ರಭಸಕ್ಕೆ ಮನೆಯ ಮುಂಭಾಗದ ಚಾವಣಿ ಸಂಪೂರ್ಣ ಜಖಂಗೊಂಡಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿದ್ದು, ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದಾರೆ.
ಈ ನಡುವೆ ಬಸ್ಸಿನಡಿ ಸಿಲುಕಿ ಕೆಲವು ಮಕ್ಕಳು ಗಾಯಗೊಂಡಿದ್ದು, ಅವರ ಪೈಕಿ ತುಳಸಿ (15), ನಿವೇದಿತ (14) ಎಂಬವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅವರನ್ನು ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ನಡುವೆ ಐವರು ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈ ಭಾಗದಲ್ಲಿ ಖಾಸಗಿ ಬಸ್ಗಳು ವಿಪರೀತ ವೇಗದಿಂದ ಸಂಚರಿಸುತ್ತಿದ್ದು, ಇದರ ಬಗ್ಗೆ ಈಗಾಗಲೇ ಹಲವು ಬಾರಿ ದೂರು ನೀಡಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.