ನ್ಯೂಸ್ ನಾಟೌಟ್ : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಯಗಟಿ ಸಮೀಪದ ಶಿವಗಂಗಾ ಗಿರಿ ಬೆಟ್ಟದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಾರಿ ಭಯಭೀತರಾಗಿದ್ದಾರೆ.
ಮದುವೆಯ ಶೂಟಿಂಗ್ ಮಾಡುತ್ತಿರುವ ವೇಳೆಯಲ್ಲಿ ಕಡೂರು ಅರಣ್ಯ ವಲಯ ವ್ಯಾಪ್ತಿಯ ಶಿವಗಂಗಾ ಗಿರಿ ಬೆಟ್ಟದಲ್ಲಿ ಮೂರು ಚಿರತೆಗಳು ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿವೆ. ಗಿರಿಯ ತುದಿಯಲ್ಲಿರುವ ಚಿರತೆಗಳು ಸೆರೆಯಾಗಿದ್ದು, ಶಿವಗಂಗಾ ಗಿರಿಯ ಕೆಳಗಿರುವ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮದ ಮದುವೆ ವಿಡಿಯೋ ಚಿತ್ರೀಕರಣ ನಡೆಯುತ್ತಿತ್ತು.
ಡ್ರೋಣ್ ಕ್ಯಾಮರಾದಲ್ಲಿ ಚಿರತೆಗಳು ಸೆರೆಯಾಗಿದ್ದು, ಜನರನ್ನೇ ಆತಂಕಕ್ಕೆ ತಳ್ಳುವಂತೆ ಮಾಡಿದೆ.ಮನೆಯಿಂದ ಹೊರಗಡೆ ಬರೋದಕ್ಕೆ ಅಲ್ಲಿನ ಜನ ಹಿಂಜರಿಯುತ್ತಿದ್ದಾರೆ.ಡ್ರೋನ್ ಕ್ಯಾಮರವನ್ನು ಕಂಡ ಚಿರತೆಗಳು ಕೂಡ ಗಾಬರಿಗೊಂಡಿದ್ದು, ಚಿರತೆಗಳ ಚಲನವಲನ ಸೆರೆಯಾಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿವೆ.ಸದ್ಯ ಭಯದ ವಾತಾವರಣದಲ್ಲಿರುವ ಕಾರ್ಮಿಕರು ಹೊಲಗಳಿಗೆ ಕೆಲಸಕ್ಕೆ ತೆರಳಲು ಕೂಡ ಹಿಂದೇಟು ಹಾಕುತ್ತಿದ್ದಾರೆ.
ಇತ್ತೀಚೆಗೆ ಕಾಡುಪ್ರಾಣಿಗಳ ಉಪಟಳ ಜೋರಾಗಿದ್ದು,ಅದರಲ್ಲೂ ಚಿರತೆ ಮತ್ತು ಕಾಡಾನೆಗಳು ರಾಜಾರೋಷವಾಗಿ ನಾಡಿಗೆ ಬಂದು ತಿರುಗಾಡುತ್ತಿವೆ.ಶಾಲಾ ಮಕ್ಕಳು, ಕೂಲಿ ಕಾರ್ಮಿಕರು,ರೈತರು ಕಂಗಾಲಾಗಿದ್ದು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.ಕಾಡುಪ್ರಾಣಿಗಳು ಊರಿನತ್ತ ಬಾರದಂತೆ ಏನಾದರೂ ವ್ಯವಸ್ಥೆ ಮಾಡಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.