ನ್ಯೂಸ್ ನಾಟೌಟ್: ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಅಭಿನವ ಹಾಲಶ್ರೀ (Abhinava Halashree) ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಅಭಿನವ ಹಾಲಶ್ರೀಗಾಗಿ ಸಿಸಿಬಿ ಪೊಲೀಸರ ಹುಡುಕಾಟ ನಡೆಸಲಾಗುತ್ತಿದ್ದು, ಕಾರು ಚಾಲಕನ ವಿಚಾರಣೆಗೊಳಪಡಿಸುವ ಮೂಲಕ ಸ್ವಾಮೀಜಿ ಪತ್ತೆಗೆ ಪ್ರಯತ್ನ ಮಾಡಲಾಗುತ್ತಿದೆ.
ಸ್ವಾಮೀಜಿ ಬಳಕೆ ಮಾಡುತ್ತಿದ್ದ ಇನ್ನೋವಾ ಕಾರು ಹಾಗೂ ಚಾಲಕ ನಿಂಗರಾಜುನನ್ನು ಸಿಸಿಬಿ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದು, ಸ್ವಾಮೀಜಿಯನ್ನ ಕೊನೆಯದಾಗಿ ಎಲ್ಲಿ ಡ್ರಾಪ್ ಮಾಡಲಾಯಿತು. ಬೇರೆ ಯಾವ ಕಾರಿನಲ್ಲಿ ಹೋದ್ರು. ಎಲ್ಲಿಗೆ ಹೋದ್ರು, ಎಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮಾಹಿತಿ ಕಲೆ ಹಾಕಲಾಗಿದೆ ಎನ್ನಲಾಗಿದೆ.
ಸ್ವಾಮೀಜಿ ಎಸ್ಕೇಪ್ ಆಗುವ ವೇಳೆ ನಾಲ್ಕು ಸಿಮ್ ಕಾರ್ಡ್ ಹಾಗೂ ನಾಲ್ಕು ಬೇಸಿಕ್ ಮೊಬೈಲ್ ಖರೀದಿಸಿ ಮೈಸೂರಿನಿಂದ ಎಸ್ಕೇಪ್ ಆಗಿದ್ದಾರೆ. ಮೈಸೂರಿನಲ್ಲಿ ತಮ್ಮ ಕಾರನ್ನ ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಎಸ್ಕೇಪ್ ಆಗುವ ವೇಳೆ ಕಾರಿನ ನಂಬರ್ ಪ್ಲೇಟ್ ತೆಗೆದಿದ್ದಾರೆ. ನಂಬರ್ ಪ್ಲೇಟ್ ತೆಗೆದು ಕಾರನ್ನು ಆಪ್ತನ ಮನೆಯಲ್ಲಿ ನಿಲ್ಲಿಸಿ ಎಸ್ಕೇಪ್ ಹೋಗಿದ್ದಾರೆ ಎಂದಿದ್ದಾರೆ.
ಇದರ ಜೊತೆಗೆ, ಉದ್ಯಮಿಗೆ ಚೈತ್ರಾ ಕುಂದಾಪುರ (Chaitra Kundapur) ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ 7ನೇ ಆರೋಪಿ ಶ್ರೀಕಾಂತ್ ಮನೆಯನ್ನು ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ 41 ಲಕ್ಷ ರೂ. ನಗದು ಪೆಟ್ಟಿಗೆಯೊಂದರಲ್ಲಿ ದೊರೆತಿದೆ.
ಗುಡ್ಡೆಯಂಗಡಿಯಲ್ಲಿರುವ ಶ್ರೀಕಾಂತ್ ಮನೆಯ ಬಾಕ್ಸ್ನಲ್ಲಿ ಇಟ್ಟಿದ್ದ 41 ಲಕ್ಷ ರೂ. ನಗದು ಪತ್ತೆಯಾಗಿದ್ದು, ದಾಖಲೆ ರಹಿತ ಈ ಹಣ ಹಲವು ಅನುಮಾನಗಳನ್ನು ಮೂಡಿಸಿದೆ. ಅದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಸ ಮನೆಯ ಬಗ್ಗೆ ಶ್ರೀಕಾಂತ್ ನಾಯ್ಕ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.