ನ್ಯೂಸ್ ನಾಟೌಟ್ : ಸಾಧಿಸಬೇಕೆಂಬ ಹಠವೊಂದಿದ್ದರೆ ಈ ಜಗತ್ತಿನಲ್ಲಿ ಏನೂ ಬೇಕಾದರೂ ಮಾಡಬಹುದು.ಎಷ್ಟೋ ಜನ ಯುವಕರು ಈಗೀಗ ಕೃಷಿಯತ್ತ ಮುಖ ಮಾಡಿ ಸಾಧಿಸಿ ತೋರಿಸಿದವರು ನಮ್ಮ ಕಣ್ಣ ಮುಂದಿದ್ದಾರೆ.ಈ ಸಾಲಿನಲ್ಲಿ ಇಲ್ಲೊಬ್ಬರು ರೈತ ಸೇರಿಕೊಳ್ಳುತ್ತಾರೆ.
ಹೌದು, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಯುವ ರೈತ ಸಿದ್ಧೇಶ್ವರ ಬರ್ಬಡೆ ಪದವಿ ಮುಗಿಸಿ ನರ್ಸರಿ ಉದ್ಯಮ ಆರಂಭಿಸಿ ಇಂದು ವಾರ್ಷಿಕ 20 ಲಕ್ಷ ಲಾಭ ಗಳಿಸುತ್ತಿದ್ದಾರೆ ಅಂದ್ರೆ ಎಲ್ಲರೂ ಅಚ್ಚರಿಪಡಬೇಕಾದ ವಿಚಾರ.ಕೃಷಿ ಪದವೀಧರರಾದ ಸಿದ್ಧೇಶ್ವರ ಬರ್ಬಡೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ತಾನೊಬ್ಬ ಉತ್ತಮ ಕೃಷಿಕ ಅನ್ನೋದನ್ನ ನಿರೂಪಿಸಿದ್ದಾರೆ..!
ಅಂದ ಹಾಗೆ ಇವರು ತಮ್ಮ ಕುಟುಂಬದಲ್ಲಿ ನರ್ಸರಿ ನಡೆಸುತ್ತಿರುವ ಮೊದಲ ತಲೆಮಾರಿನ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವ್ಯವಸ್ಥಾಪಕರ ಹೇಳೋ ಪ್ರಕಾರ, ಸಿದ್ಧೇಶ್ವರ್ ವಡಾಲಾದ ಶ್ರೀ ರಾಮ್ ಗ್ರಾಮೀಣ ಸನಿಧನ್ ಏವಂ ವಿಕಾಸ್ ಪ್ರತಿಷ್ಠಾನದಲ್ಲಿ ಆಯೋಜಿಸಲಾದ ಅಗ್ರಿ-ಕ್ಲಿನಿಕ್ ಮತ್ತು ಅಗ್ರಿ-ಬಿಸಿನೆಸ್ ಸೆಂಟರ್ (AC&ABC) ಯೋಜನೆಯಡಿಯಲ್ಲಿ ತರಬೇತಿಗೆ ಹಾಜರಾಗಿದ್ದರು. ತರಬೇತಿ ಪಡೆದ ನಂತರ ಸ್ವಂತವಾಗಿ 70 ಸಾವಿರ ಬಂಡವಾಳ ಹೂಡಿ ನರ್ಸರಿ ಸ್ಥಾಪಿಸಿದ್ದಾರೆ.ಸದ್ಯ ಆರಂಭದಲ್ಲಿ ಅಲಂಕಾರಿಕ ಗಿಡಗಳ ಸಸಿಗಳನ್ನು ಮಾರಾಟ ಮಾಡುತ್ತಿದ್ದು, ಭಾರಿ ಆದಾಯ ಕಂಡುಕೊಂಡಿದ್ದಾರೆ.
ರೈತರಿಂದ ಹಣ್ಣಿನ ಗಿಡಗಳ ಬೇಡಿಕೆಯನ್ನು ಕಂಡುಕೊಂಡು ತಮ್ಮ ವ್ಯಾಪಾರವನ್ನು ವಿಸ್ತರಿಸುತ್ತಾ ಹೋದರು.ಬಳಿಕ ಎಲ್ಲಾ ರೀತಿಯ ಗಿಡಗಳನ್ನು ಅವರು ತಮ್ಮ ನರ್ಸರಿಗೆ ಸೇರಿಸಿದ್ದಾರೆ.ಇದೀಗ ಲಾಭದಾಯಕ ಜೀವನವನ್ನು ನಡೆಸುತ್ತಿದ್ದಾರೆ.
ಸಿದ್ಧೇಶ್ವರ ಅವರು ಕ್ರಮೇಣ ನರ್ಸರಿ ವ್ಯಾಪಾರವನ್ನೇ ಗಟ್ಟಿ ಮಾಡಿಕೊಂಡರು.ದಿನದಿಂದ ದಿನಕ್ಕೆ ಇವರ ಜನಪ್ರಿಯತೆ ಹೆಚ್ಚುತ್ತಾ ಹೋಯಿತು.ಇದೀಗ ಉತ್ತಮ ಆದಾಯ ಗಳಿಸುತ್ತಿದ್ದು,ಬರಿ 70 ಸಾವಿರದಲ್ಲಿ ಆರಂಭವಾದ ಅವರ ವಹಿವಾಟಿನ ವಾರ್ಷಿಕ ಆದಾಯ 20 ಲಕ್ಷಕ್ಕೂ ಮೀರಿದೆ ಎಂದರೆ ಅವರಲ್ಲಿರುವ ದೃಢ ಸಂಕಲ್ಪ ಹಾಗೂ ಛಲವೇ ಕಾರಣ. ಸದ್ಯ ಇವರ ಈ ಬ್ಯುಸಿನೆಸ್ನಿಂದಾಗಿ ಇತರ ರೈತರೂ ಕೂಡ ಚೇತರಿಕೆ ಕಂಡು ಕೊಂಡಿದ್ದಾರೆ.ಸೊಲ್ಲಾಪುರ ಜಿಲ್ಲೆಯ 3000ಕ್ಕೂ ಹೆಚ್ಚು ರೈತರಿಗೆ ತಮ್ಮ ಸೇವೆಯನ್ನು ನೀಡುತ್ತಿದ್ದು, ತಮ್ಮ ಸಂಸ್ಥೆಯಲ್ಲಿ 6 ಮಂದಿಗೆ ಉದ್ಯೋಗವನ್ನೂ ಕೂಡ ನೀಡಿ ಅವರ ಬಾಳಲ್ಲಿಯೂ ಬೆಳಕಾಗಿದ್ದಾರೆ.