ನ್ಯೂಸ್ ನಾಟೌಟ್: ದ್ವಿಚಕ್ರ ವಾಹನವನ್ನು ಓವರ್ಟೇಕ್ ಮಾಡುತ್ತಿದ್ದ ಟೆಂಪೊರಿಕ್ಷಾವನ್ನು ಬಚಾವ್ ಮಾಡಲು ಹೋದ ಸರ್ಕಾರಿ ಬಸ್ಸೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಬಸ್ಸಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶವಾಗಿ ಬಚವಾದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕಂದೂರಿನಲ್ಲಿ ಸಂಭವಿಸಿದೆ.
ಅಪಘಾತದಿಂದ ವಿದ್ಯುತ್ ಕಂಬ ತುಂಡಾಗಿದ್ದು, ತಕ್ಷಣ ಸ್ಥಳಕ್ಕೆ ಬಂದ ಮೆಸ್ಕಾಂ ಸಿಬ್ಬಂದಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಚಾಲಕನ ಸಮಯಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಡಿಪು ಮಾರ್ಗವಾಗಿ ಕಾಸರಗೋಡಿನಿಂದ ಬಿ.ಸಿ.ರೋಡು ಸಂಚರಿಸುತ್ತಿದ್ದ ಸರ್ಕಾರಿ ಬಸ್ ಸಜೀಪಮೂಡ ಗ್ರಾಮದ ಕಂದೂರಿಗೆ ಸಮೀಪಿಸಿದಾಗ ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಮೀನು ಸಾಗಾಟ ಟೆಂಪೋ ರಿಕ್ಷಾವೊಂದು ಕಂದೂರಿನ ಬಜಾರ್ ಅಡಿಟೋರಿಯಂ ಬಳಿ ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡಲು ಹೋದಾಗ ಎದುರಿನಿಂದ ಸರ್ಕಾರಿ ಬಸ್ ಬರುತ್ತಿತ್ತು. ತಕ್ಷಣ ಬಸ್ ಚಾಲಕನ ಸಮಯಪ್ರಜ್ಞೆಯಿಂದ ರಿಕ್ಷಾ ಚಾಲಕನ್ನು ರಕ್ಷಿಸಲು ಹೋಗಿ ಬಸ್ಸನ್ನು ಎಡಬದಿಗೆ ತಿರುಗಿಸಿದಾಗ ಬಸ್ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬವನ್ನು ತೆರವುಗೊಳಿಸುವ ಕಾರ್ಯದಲ್ಲಿ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.