ನ್ಯೂಸ್ ನಾಟೌಟ್ :ಮಧ್ಯಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದೆ.ಕಾಮುಕರ ಅಟ್ಟಹಾಸದಿಂದ ಬಳಲಿ 12 ವರ್ಷದ ಬಾಲಕಿಯೊಬ್ಬಳು ವಿವಸ್ತ್ರಗಳೊಂದಿಗೆ ,ರಕ್ತಸ್ರಾವದಿಂದ ಬೀದಿ ಬೀದಿಯಲ್ಲಿ ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಸಹಾಯಕ್ಕೆ ಬಾರದ ಮನಕಲಕುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತ ಬಾಲಕಿ ಮೇಲೆರಗಿರ ಕಾಮುಕರು ನಗರದ ದಂಡಿ ಆಶ್ರಮದ ಬಳಿ ಎಸೆದು ಹೋಗಿದ್ದರು ಎಂದು ಹೇಳಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳ ಪ್ರಕಾರ ಬಾಲಕಿ ವಸತಿ ಏರಿಯಾದಲ್ಲಿ ನಡೆದಾಡುತ್ತಿರುವ ದೃಶ್ಯವಿದೆ. ಒಂದು ಚಿಂದಿ ಬಟ್ಟೆಯನ್ನು ಬಾಲಕಿ ಸುತ್ತಿಕೊಂಡಿದ್ದು , ಸಹಾಯಕ್ಕಾಗಿ ಓರ್ವ ವ್ಯಕ್ತಿಯ ಬಳಿಗೆ ಬಾಲಕಿ ಹೋಗುತ್ತಾಳೆ.ಆದರೆ ಆತ ಕರಣೆ ತೋರದೆ ಆಕೆಯನ್ನು ಬೈದು ಕಳುಹಿಸಿ ಮುಂದೆ ಹೋಗುತ್ತಾನೆ.
ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿ ಆಸ್ಪತ್ರೆಗೆ ದಾಖಲಾಗುತ್ತಾಳೆ. ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ಮತ್ತೊಂದು ಆಸ್ಪತ್ರೆಗೆ ದಾಖಲಿಸಿ ಸ್ಥಳಾಂತರ ಮಾಡಲಾಗುತ್ತದೆ.ಸದ್ಯ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ, ಬಂಧಿಸಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದೆ.
ಬಾಲಕಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ ಅನ್ನೋದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಎಲ್ಲಿಂದ ಬಂದಿದ್ದಾಳೆಂದು ನಮಗೆ ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ. ಆದರೆ, ಆಕೆಯ ಉಚ್ಚಾರಣೆಯು ಉತ್ತರ ಪ್ರದೇಶದ ಪ್ರಯಾಗ್ರಾಜ್ನವಳು ಎಂದು ಸೂಚಿಸುತ್ತದೆ ಎಂದು ಸಚಿನ್ ಶರ್ಮಾ ಹೇಳಿದ್ದಾರೆ.
ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಉಜ್ಜಯಿನಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಸಮಿತಿಯು ಪೊಲೀಸರಿಂದ ಪ್ರಾಥಮಿಕ ತನಿಖಾ ವರದಿಯ ವಿವರಗಳನ್ನು ಕೇಳಿದೆ ಮತ್ತು ಪೊಕ್ಸೋ ಕಾಯಿದೆಯಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳನ್ನು ಅನುಸರಿಸಲು ಕೇಳಿದೆ.
ಈ ಘಟನೆಯ ಅತ್ಯಂತ ದುರದೃಷ್ಟಕರ ಸಂಗತಿ ಏನೆಂದರೆ, ಈವರೆಗೂ ಬಾಲಕಿಗೆ ಸಹಾಯ ಮಾಡಲು ಯಾರೊಬ್ಬರು ಮುಂದಾಗಿಲ್ಲ ಎಂದು ಎನ್ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದ್ದಾರೆ. ಇದು ಸಮಾಜದ ಕರಾಳ ಮುಖವನ್ನು ಬಹಿರಂಗಪಡಿಸುತ್ತದೆ ಎಂದು ಎನ್ಸಿಪಿಸಿಆರ್ ಅಧ್ಯಕ್ಷರು ಹೇಳಿದ್ದಾರೆ.