ನ್ಯೂಸ್ ನಾಟೌಟ್ : ಎಲ್ಲೆಡೆ ಕೃಷ್ಣಾಷ್ಟಮಿಯ ಸಂಭ್ರಮ ಮನೆ ಮಾಡಿದೆ.ಇದಕ್ಕಾಗಿ ಸಕಲ ಸಿದ್ಧತೆಗಳು ನಡಿತಿವೆ.ಇನ್ನೊಂದು ದಿನ ಕಳೆದರೆ ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ ಗಮನ ಸೆಳೆಯಲಿದೆ. ಮುದ್ದು ಪುಟಾಣಿಗಳು ಕೃಷ್ಣನ ವೇಷ ತೊಟ್ಟು ಸಂಭ್ರಮ ಪಡೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.. !
ಇತ್ತ ಕೃಷ್ಣನ ದೇಗುಲಗಳಲ್ಲಿಯೂ ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಪೂಜೆ ನೆರವೇರಲಿದೆ.ಕರಾವಳಿಯಲ್ಲಿ ಇತಿಹಾಸ ಪ್ರಸಿದ್ದ ಉಡುಪಿಯಲ್ಲಿರುವ ಶ್ರೀ ಕೃಷ್ಣ ದೇವಾಲಯ ಭಕ್ತರ ಗಮನ ಸೆಳೆದರೆ , ಬೆಂಗಳೂರಿನಲ್ಲಿರುವ ಇಸ್ಕಾನ್ ದೇಗುಲಕ್ಕೆ ದಿನವೊಂದಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಇದೀಗ ಭಾರತದಲ್ಲಿಯೇ ಮನಸೂರೆಗೊಳ್ಳುವ ಕೃಷ್ಣ ಮಂದಿರ ಭಕ್ತರ ದರ್ಶನಕ್ಕಾಗಿ ಸಿದ್ಧವಾಗಿ ನಿಂತಿದೆ.ಕೊಲ್ಕಾತ್ತದಲ್ಲಿರುವ ಇಸ್ಕಾನ್ ಮಂದಿರ ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ಕೃಷ್ಣ ದೇವಾಲಯ ಎಂಬ ಖ್ಯಾತಿಗೂ ಕಾರಣವಾಗಿದೆ. ಇಂಟರ್ನ್ಯಾಶನಲ್ ಸೊಸೈಟಿ ಆಫ್ ಕೃಷ್ಣ ಕಾನ್ಷಿಯಸ್ನೆಸ್ ಅಂದರೆ ಇಸ್ಕಾನ್ (ISKON) ಬರೋಬ್ಬರಿ 12 ಎಕರೆ ಜಾಗದಲ್ಲಿ ವಿಶ್ವದ ಅತಿದೊಡ್ಡ ಕೃಷ್ಣ ದೇವಾಲಯವನ್ನು ನಿರ್ಮಿಸಿದೆ.ಇದು ಕೋಲ್ಕತ್ತಾದಿಂದ 130 ಕಿ.ಮೀ ದೂರದಲ್ಲಿರುವ ನಾಡಿಯಾ ಜಿಲ್ಲೆಯ ಮಾಯಾಪುರದಲ್ಲಿ ನಿರ್ಮಾಣಗೊಂಡಿದ್ದು, ಹಲವು ವಿಭಿನ್ನತೆಗಳನ್ನು ಒಳಗೊಂಡಿದೆ. ಹಲವು ವರ್ಷಗಳಿಂದ ಈ ದೇವಾಲಯವನ್ನು ನಿರ್ಮಾಣ ಕಾರ್ಯಗಳಾಗುತ್ತಿದ್ದು,ವಿಶೇಷವೆಂದರೆ ಈ ವರ್ಷ 2023ರಲ್ಲಿ ಈ ದೇವಾಲಯ ಭಕ್ತರಿಗಾಗಿ ತೆರೆಯಲಿದೆ ಎಂದು ಹೇಳಲಾಗುತ್ತಿದೆ.
ಮಾಯಾಪುರದ ಈ ಇಸ್ಕಾನ್ ದೇವಾಲಯ ಹಲವು ವೈಶಿಷ್ಟ್ಯಗಳನ್ನೊಳಗೊಂಡಿದೆ.ಇದು ವಿಶ್ವದ ಅತಿದೊಡ್ಡ ಅರ್ಚಕ ಮಹಡಿಯನ್ನು ಹೊಂದಿದ್ದು, ಆಕರ್ಷಕವಾಗಿದೆ.ಒಟ್ಟು 12 ಎಕರೆ ಜಾಗದಲ್ಲಿರುವ ಈ ದೇವಾಲಯದ ಹೊರನೋಟವೇ ಅತ್ಯಾಕರ್ಷಕವಾಗಿದ್ದು, ಸುಮಾರು 2.5 ಎಕರೆಗಳಲ್ಲಿ ನಿರ್ಮಿಸಲಾಗಿರುವ ಈ ಅರ್ಚಕರ ಮಹಡಿಯಲ್ಲಿ 1.5 ಎಕರೆಯಲ್ಲಿ ಕೀರ್ತನ ಸಭಾಂಗಣವನ್ನೇ ನಿರ್ಮಿಸಲಾಗಿದೆಯಂತೆ. ಒಂದು ಮಾಹಿತಿಗಳ ಪ್ರಕಾರ, ಸುಮಾರು 10 ಸಾವಿರ ಭಕ್ತರು ಏಕಕಾಲದಲ್ಲಿ ಇಲ್ಲಿ ಕೀರ್ತನೆಗಾಗಿ ಕುಳಿತುಕೊಳ್ಳಬಹುದು ಮತ್ತು ಕೃಷ್ಣನ ಆರಾಧನೆ ಮಾಡಬಹುದು..!
ಸದ್ಯ ಇದರ ಚಿತ್ರಣ ಹೇಗಿರಬಹುದು ಎಂಬ ಕಲ್ಪನೆ ನಿಮ್ಮ ಕಣ್ಣ ಮುಂದೆ ಬಂದಿರಬಹುದು. ವಿಶ್ವದಲ್ಲಿಯೇ ಪ್ರಸಿದ್ಧ ಕೃಷ್ಣ ದೇವಾಲಯದ ಒಳಾಂಗಣ ವಿನ್ಯಾಸವನ್ನು ಪಾಶ್ಚಾತ್ಯ ಶೈಲಿಯಲ್ಲಿ ನಿರ್ಮಿಸಲಾಗಿದ್ದರೆ, ಇಲ್ಲಿನ ವಾತಾವರಣ ಮನೋಹರವಾಗಿದೆ.ಕೃಷ್ಣನ ಆರಾಧನೆ ಜತೆಗೆ ಕುತೂಹಲಗಳಿಗೂ ಕಾರಣವಾಗಿರುವ ಈ ಕೃಷ್ಣ ದೇವಾಲಯ ಭಕ್ತರನ್ನು ದೇವಾಲಯದತ್ತ ಆಕರ್ಷಿಸುವಂತೆ ಮಾಡೋದ್ರಲ್ಲಿ ಅನುಮಾನನೇ ಇಲ್ಲ.
ವಿಶ್ವದ ಅತಿ ದೊಡ್ಡ ಕೃಷ್ಣ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ ಈ ದೇವಾಲಯದಲ್ಲಿ ಬೋಧನಾ ಮಂದಿರವೂ ಇದೆ. ಇಲ್ಲಿ ಭಗವತ್ ಗೀತೆಯ ಕುರಿತು ಚರ್ಚೆಯೊಂದಿಗೆ, ತತ್ವಶಾಸ್ತ್ರದ ವಿವಿಧ ವಿಷಯಗಳನ್ನು ಚರ್ಚಿಸಲಾಗುವುದು. ಈ ದೇವಾಲಯವನ್ನು 800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.