ನ್ಯೂಸ್ ನಾಟೌಟ್: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.ಒಡಿಶಾದಲ್ಲಿ ಸಿಕ್ಕಿಬಿದ್ದ 3ನೇ ಆರೋಪಿಯಾಗಿರುವ ಅಭಿನವ ಹಾಲಶ್ರೀಯನ್ನು ಇದೀಗ 10 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣ ಬೆಳಕಿಗೆ ಬಂದಾಗಿನಿಂದ ಸ್ವಾಮೀಜಿ ನಾಪತ್ತೆಯಾಗಿದ್ದರು. ಅವರು ಆಶ್ರಮದಲ್ಲಿರುವ ಕಾರನ್ನು ಖುದ್ದಾಗಿ ಡ್ರೈವ್ ಮಾಡಿಕೊಂಡು ಬೇರೆಲ್ಲಿಗೋ ಹೋಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದವು. ಹಾಗಾಗಿ, ಅತ್ತ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.ಇದೀಗ ಅವರ ಬಂಧನವಾಗಿದ್ದು, ವಂಚನೆ ಪ್ರಕರಣದಲ್ಲಿ ಆರೋಪಿ ಹಾಲಶ್ರೀಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಸೆ.29 ರ ತನಕ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ನೀಡಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಸೆ.29 ರಂದು ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಯನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ, ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಈ ವೇಳೆ ಹಾಲಶ್ರೀ ಪರ ವಕೀಲ ಅರುಣ್ ಶ್ಯಾಂ ಕೂಡ ಹಾಜರಿದ್ದು, ಪೊಲೀಸ್ ಕಸ್ಟಡಿಗೆ ಆಕ್ಷೇಪ ವ್ಯಕ್ತಪಡಿಸಿ, ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಆರೋಪಿಗೆ ಜಾಮೀನು ನೀಡದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲರು ಆಕ್ಷೇಪಿಸಿದ್ದು, ತನಿಖೆ ನಡೆಯುವ ಮಧ್ಯೆ ಜಾಮೀನು ನೀಡಬಾರದು. ಸಾಕ್ಷಿ ನಾಶವಾಗುತ್ತದೆ ಎಂದು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಯನ್ನು 10 ದಿನ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.
ಸೆ. 19ರ ಬೆಳಗ್ಗೆ ಬಂದ ವರ್ತಮಾನದ ಪ್ರಕಾರ, ಸ್ವಾಮೀಜಿಯವರನ್ನು ಒಡಿಶಾದಲ್ಲಿ ಬಂಧಿಸಲಾಗಿತ್ತು. ಒಡಿಶಾದ ಕಟಕ್ ನಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ನೆಲೆಸಿದ್ದ ಸ್ವಾಮೀಜಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಅವರು ಹೋಟೆಲ್ ಗೆ ಹೋಗಿದ್ದರು. ಆದರೆ, ಅಷ್ಟರಲ್ಲಾಗಲೇ ಅವರು ಅಲ್ಲಿಂದ ಕಾಲ್ಕಿತ್ತಿದ್ದರು ಎಂದು ಹೇಳಲಾಗಿತ್ತು.
ಹೀಗೆ ಪ್ರತಿ ಗಂಟೆಗೆ ಸ್ಥಳ ಬದಲಾಯಿಸುತ್ತಿದ್ದ ಸ್ವಾಮೀಜಿ, ಹಾಲಶ್ರೀ ಅವರು ರೈಲಿನಲ್ಲಿ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಕಾವಿಯನ್ನು ತ್ಯಜಿಸಿ, ಟೀ ಶರ್ಟ್, ಪ್ಯಾಂಟ್ ಹಾಕಿಕೊಂಡು ವೇಷ ಮರೆಸಿಕೊಂಡಿದ್ದರು. ಕಟಕ್ ನಿಂದ ಬೌದ್ಧ್ ಗಯಾಕ್ಕೆ ತೆರಳುವ ರೈಲಿನಲ್ಲಿದ್ದರೂ ಅವರನ್ನು ಸೂಕ್ತವಾಗಿ ಗುರುತು ಹಿಡಿಯುವಲ್ಲಿ ಸಿಸಿಬಿ ಯಶಸ್ವಿಯಾಗಿದೆ.