ನ್ಯೂಸ್ ನಾಟೌಟ್: ಕಲ್ಮನೆ ಸಮಾಧಿಗಳ ಒಳಭಾಗದಲ್ಲಿ ಸುಟ್ಟ ಆವಿ ಮಣ್ಣಿನ, ಅಪರೂಪದ ಶಿಲ್ಪಗಳು ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಸಮೀಪದ ಮೂಡುಕೊಣಾಜೆಯ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
‘ಹರಪ್ಪ ನಾಗರಿಕತೆ ಅಥವಾ ತಾಮ್ರ ಶಿಲಾಯುಗ ಸಂಸ್ಕೃತಿಯ ನಂತರ ಬೃಹತ್ ಶಿಲಾಯುಗದ ಪದರೀಕೃತ ಸನ್ನಿವೇಶದಲ್ಲಿ ದೊರೆತ ಈ ಶಿಲ್ಪಗಳು, ಭಾರತೀಯ ಸಾಂಸ್ಕೃತಿಕ ಇತಿಹಾಸವನ್ನು ಸಾರುತ್ತಿವೆ ಎನ್ನಲಾಗಿದೆ.
ತುಳುನಾಡಿನ ಮಾತೃಮೂಲದ ಸಾಮಾಜಿಕ ವ್ಯವಸ್ಥೆ ಹಾಗೂ ದೈವಾರಾಧನೆಯ ಪ್ರಾಚೀನತೆಯ ಅತ್ಯಂತ ವಿಶ್ವಾಸಾರ್ಹ ದಾಖಲೆಗಳಾಗಿವೆ’ ಎಂದು ಸಂಶೋಧಕ, ಮೂಲ್ಕಿಯ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಉಪನ್ಯಾಸಕರಾಗಿದ್ದ ಟಿ. ಮುರುಗೇಶಿ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
‘ರಾಜ್ಯದಲ್ಲಿ ಇದೇ ಮೊದಲಬಾರಿಗೆ ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಕಾಮಧೇನು ಅಥವಾ ಮಾತೃದೇವತೆ ಶಿಲ್ಪಗಳು ಪತ್ತೆಯಾಗಿವೆ. ಈ ಶಿಲ್ಪಗಳು, ಮಾನವ ದೇಹ ಮತ್ತು ನಂದಿಯ ಮುಖವನ್ನು ಹೊಂದಿವೆ. ಅವುಗಳಿಗೆ ಸ್ತ್ರೀ ತತ್ವದ ಸಂಕೇತವಾಗಿ ಎರಡು ಮೊಲೆಗಳನ್ನು ಅಂಟಿಸಲಾಗಿದೆ.
ಇಂತಹ ಒಂದು ಶಿಲ್ಪ ಕೇರಳದ ಮಲಪ್ಪುರದ ಶಿಲಾಯುಗದ ಕುಂಭ ಸಮಾಧಿಯಲ್ಲಿ ದೊರೆತಿರುವುದನ್ನು ಬಿಟ್ಟರೆ, ದೇಶದ ಎಲ್ಲೂ ಪತ್ತೆಯಾಗಿಲ್ಲ. ಈಜಿಪ್ಟ್ನಲ್ಲಿ ಇಂಥ ಶಿಲ್ಪಗಳು ವ್ಯಾಪಕವಾಗಿ ಕಂಡುಬಂದಿವೆ’ ಎಂದು ಹೇಳಲಾಗಿವೆ. ಇವುಗಳ ಕಾಲಮಾನವನ್ನು ಕನಿಷ್ಠ ಕ್ರಿ.ಪೂ 800 ಅಥವಾ 700 ಆಗಿರಬಹುದು ಎಂದು ಅಂದಾಜಿಸಲಾಗಿದೆ.