ನ್ಯೂಸ್ ನಾಟೌಟ್: ಈ ಹಿಂದೆ ಪುರಾಣಗಳಲ್ಲಿ ಶಿವನಿಗೆ ಕಣ್ಣು ನೀಡಿದ ಮುಗ್ಧ ಭಕ್ತ ಬೇಡರ ಕಣ್ಣಪ್ಪನ ಬಗ್ಗೆ ಕೇಳಿದ್ದೇವೆ, ಆದರೆ ಇದು ಕಲಿಯುಕದ ಕಳ್ಳಪ್ಪನ ಕಥೆ ಇಲ್ಲಿದೆ.
ಶಿವಭಕ್ತನೊಬ್ಬ “ತನಗೆ ವಿವಾಹವಾಗಲು ವಧು” ಸಿಗಬೇಕೆಂದು ಪ್ರತಿದಿನ ಶಿವ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದ ಎನ್ನಲಾಗಿದೆ. ಎಷ್ಟು ಪ್ರಾರ್ಥಿಸಿದರೂ ವಧು ಸಿಗಲಿಲ್ಲ ಎಂಬ ಕಾರಣಕ್ಕೆ ಆತ ಶಿವಲಿಂಗವನ್ನೇ ಕದ್ದಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಕೌಶಂಬಿ ಜಿಲ್ಲೆಯ ಪುರಾತನ ಭೈರವ್ ಬಾಬಾ ಶಿವ ದೇವಸ್ಥಾನಕ್ಕೆ ಚೋಟು ಎಂಬಾತ ತನಗೆ ವಧು ಸಿಗಬೇಕೆಂದು ಪ್ರಾರ್ಥಿಸಿ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದ. ಈ ಮಧ್ಯೆ ಶ್ರಾವಣ ಮಾಸದ ಕೊನೆಯ ದಿನವಾದ ಆಗಸ್ಟ್ 31ರಂದು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಲಿಂಗ ನಾಪತ್ತೆಯಾಗಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸುಮಾರು ಹತ್ತು ಗಂಟೆಗಳ ಶೋಧ ಕಾರ್ಯದ ನಂತರ ಶಂಕಿತ ಆರೋಪಿ ಚೋಟುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತನ್ನ ಬೇಡಿಕೆಯನ್ನು ದೇವರು ಈಡೇರಿಸದಿದ್ದಕ್ಕೆ ಲಿಂಗವನ್ನು ಕದ್ದು, ದೇವಾಲಯದಿಂದ ಅನತಿ ದೂರದಲ್ಲಿ ಅಡಗಿಸಿ ಇಟ್ಟಿರುವುದಾಗಿ ಬಾಯ್ಬಿಟ್ಟಿದ್ದ ಎಂದು ವರದಿ ವಿವರಿಸಿದೆ.
ಶಿವಲಿಂಗವನ್ನು ಮರಳಿ ಪಡೆದ ನಂತರ ಪೊಲೀಸರು ಚೋಟುವನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇಂತಹ ವಿಚಿತ್ರ ಘಟನೆಯನ್ನು ಕೇಳಿ ಪೊಲೀಸರೇ ದಂಗಾಗಿದ್ದು, ದೇಗುಲಕ್ಕೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ.