ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೇ ಯುವಕನೊಬ್ಬ ಸೀಳಿ ಬಿಡ್ತೀನಿ ಎಂದು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಬೆಂಗಳೂರಿನ ಕೋಣನಕುಂಟೆ ನಿವಾಸಿ ನಯಾಜ್ ಖಾನ್ನನ್ನು ಬಂಧಿಸಲಾಗಿದೆ. ಈತ ರಿಕ್ಷಾ ಚಾಲಕ ಎಂದು ತಿಳಿದು ಬಂದಿದೆ.
ಬುರ್ಖಾ ಹಾಕಿದ ಯುವತಿ ಮತ್ತು ಟೋಪಿ ಧರಿಸಿದ ಯುವಕ ಇಬ್ಬರೂ ಸೇರಿ ಜೈ ಶ್ರೀರಾಮ್ (Jai Shree Ram) ಎಂದು ಹೇಳಿದ್ದಕ್ಕೆ ಸಾಮಾಜಿಕ ಜಾಲತಾಣದ (Threatening on Social Media) ಮೂಲಕ ಯುವಕ ಬೆದರಿಕೆ ಹಾಕಿದ್ದ. ಯುವಕ ಉರ್ದು ಭಾಷೆಯಲ್ಲಿ ಬೆದರಿಕೆ ಹಾಕಿದ್ದು, ರಿಕ್ಷಾವೊಂದರ ಬಣ್ಣವನ್ನು ಆಧರಿಸಿ ಇದು ಬೆಂಗಳೂರಿನ ಯುವಕನ ಕೃತ್ಯ ಎನ್ನುವ ಸಣ್ಣ ಅನುಮಾನವೊಂದು ವ್ಯಕ್ತವಾಗಿತ್ತು. ಈ ಬೆದರಿಕೆಯ ವಿಡಿಯೊವನ್ನು ವ್ಯಕ್ತಿಯೊಬ್ಬರು ಬೆಂಗಳೂರು ಪೊಲೀಸರ ಟ್ವಿಟರ್ ಅಕೌಂಟ್ಗೆ ಟ್ಯಾಗ್ ಮಾಡಿದ್ದು, ಪೊಲೀಸರು ಈ ಬಗ್ಗೆ ಕಾರ್ಯಪ್ರವೃತ್ತರಾದರು.
ಯುವಕ ಉರ್ದು ಭಾಷೆಯಲ್ಲಿ ಅತ್ಯಂತ ಅಸಭ್ಯ ಭಾಷೆ ಮತ್ತು ಭಯ ಹುಟ್ಟಿಸುವ ಭಾವ ಭಂಗಿಗಳಲ್ಲಿ ವಿಡಿಯೊ ಮಾಡಿ ಸೀಳಿ ಬಿಡ್ತೀನಿ ಎಂದು ಬೆದರಿಕೆ ಹಾಕಿದ್ದ.ಯುವಕ ಮೊದಲು ತಾನು ಹಾಕಿಕೊಂಡಿದ್ದ ಟೋಪಿಯನ್ನು ತೆಗೆದು ಭಯ ಹುಟ್ಟಿಸುವ ರೀತಿಯಲ್ಲಿ ಬೆದರಿಕೆ ಹಾಕುತ್ತಾನೆ. ನಾಲಿಗೆಯನ್ನು ಕಚ್ಚಿಕೊಂಡು, ಬೆರಳುಗಳನ್ನು ಹಿಡಿದು ಹೆದರಿಸುತ್ತಾನೆ, ಕುತ್ತಿಗೆ ಕತ್ತರಿಸುತ್ತೇನೆ ಎಂದು ಹೇಳುವ ರೀತಿಯಲ್ಲಿ ಮಾತನಾಡುತ್ತಾನೆ.
ಜೈಶ್ರೀರಾಮ್ ಎಂದು ಘೋಷಣೆ ಮಾಡುವ ಮುಸ್ಲಿಂ ದಿರಸು ಧರಿಸಿದವರು ನಿಜಕ್ಕೂ ಮುಸ್ಲಿಮರೇನಾ ಎನ್ನುವುದು ಸ್ಪಷ್ಟವಿಲ್ಲ. ಆದರೆ, ಬೆಂಗಳೂರು ಪೊಲೀಸರಿಗೆ ಮುಖ್ಯವಾಗಿದ್ದು ಬೆದರಿಕೆ ಹಾಕಿದ ಯುವಕ ಬೆಂಗಳೂರಿನವನೇ ಎನ್ನುವುದು. Right wing guy ಎಂಬವರು ಮಾಡಿದ ಟ್ವೀಟ್ ಆಧರಿಸಿ ಅವರು ಬಲೆ ಬೀಸಿದಾಗ ನಯಾಜ್ ಖಾನ್ ಸಿಕ್ಕಿಬಿದ್ದಿದ್ದಾನೆ. ಈತ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದ.
ನಯಾಜ್ ಖಾನ್ ವಿರುದ್ಧ ಯಾವುದೇ ಹಳೆ ಪ್ರಕರಣಗಳು ಇಲ್ಲ. ಮೂಲ ವಿಡಿಯೋ ನೋಡಿ ಸಿಟ್ಟುಗೊಂಡು ಈ ರೀತಿ ಮಾಡಿದ್ದಾಗಿ ಆತ ವಿಚಾರಣೆಯ ವೇಳೆ ಹೇಳಿದ್ದಾನೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.