ನ್ಯೂಸ್ ನಾಟೌಟ್ : ಬಾಹುಬಲಿ ಚಿತ್ರ ಭರ್ಜರಿ ಪ್ರದರ್ಶನ ಕಂಡ ಬಳಿಕ ಕರಾವಳಿ ಬೆಡಗಿ ಹಾಗೂ ಟಾಲಿವುಡ್ ಖ್ಯಾತ ನಟಿ ಅನುಷ್ಕಾ ಶೆಟ್ಟಿಗೆ ಇನ್ಯಾವುದು ಚಿತ್ರಗಳು ಕೈಹಿಡಿಲಿಲ್ಲ. ಇದೀಗ ಸ್ವೀಟಿ ಎಂದೇ ಖ್ಯಾತಿ ಗಳಿಸಿರುವ ನಟಿ ಅನುಷ್ಕಾ ಶೆಟ್ಟಿ ‘ಕಥನಾರ್- The Wild Sorcerer’ ಚಿತ್ರದ ಮೂಲಕ ಮಲಯಾಳಂಗೆ ಪದಾರ್ಪಣೆ ಮಾಡಲಿದ್ದಾರೆ.
ಹೌದು, ಚಿತ್ರದಲ್ಲಿ ಜಯಸೂರ್ಯ ನಟಿಸಿದ್ದು, ಇದೊಂದು ವಿಭಿನ್ನ ಕಥೆಯಾಗಿರಲಿದೆ. ‘#ಹೋಂ’ ಸಿನಿಮಾ ಖ್ಯಾತಿಯ ರೋಜಿನ್ ಥಾಮಸ್ ಈ ಚಿತ್ರದ ನಿರ್ದೇಶನ ಮಾಡಲಿದ್ದಾರೆ. ಅಂದ ಹಾಗೆ ಈ ಸಿನಿಮಾ ಅತೀಂದ್ರಿಯ ಶಕ್ತಿಗಳು ಹೊಂದಿರುವ ಕೇರಳದ ಪಾದ್ರಿ ಕಡಮತ್ತತ್ತು ಕಥನಾರ್ ಎಂಬುವವರ ಕಥೆಗಳನ್ನು ಆಧರಿಸಿದೆ ಎಂದು ತಿಳಿದು ಬಂದಿದೆ.
ಚಿತ್ರತಂಡ ಈಗಾಗಲೇ ಶೇ 50 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು,ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಕಥನಾರ್ ಅನ್ನು ವರ್ಚುವಲ್ ಪ್ರೊಡಕ್ಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರೀಕರಿಸಲಾಗುತ್ತಿದೆ. ಚಿತ್ರದ ಪ್ರಮುಖ ಭಾಗಗಳನ್ನು 45,000 ಚದರ ಅಡಿಗಳ ಮಾಡ್ಯುಲರ್ ಶೂಟಿಂಗ್ ಸೆಟ್ನಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ.
ಚಿತ್ರಕ್ಕೆ ಆರ್.ರಮಾನಂದ್ ಅವರ ಚಿತ್ರಕಥೆ, ನೀಲ್ ಡಿ ಕುನ್ಹಾ ಅವರ ಛಾಯಾಗ್ರಹಣ, ಜಂಗ್ಜಿನ್ ಪಾರ್ಕ್ ಅವರ ಸಾಹಸ ಮತ್ತು ರಾಹುಲ್ ಸುಬ್ರಹ್ಮಣ್ಯನ್ ಉನ್ನಿ ಅವರ ಸಂಗೀತ ನಿರ್ದೇಶನವಿದೆ. ಶ್ರೀ ಗೋಕುಲಂ ಮೂವೀಸ್ ಚಿತ್ರಕ್ಕೆ ಬೆಂಬಲ ನೀಡುತ್ತಿದೆ. ಚಿತ್ರವನ್ನು ಹಲವಾರು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.ಈ ಮಧ್ಯೆ, ಅನುಷ್ಕಾ ಶೆಟ್ಟಿ ಅವರ ಕಮ್ ಬ್ಯಾಕ್ ಚಿತ್ರ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಮುಂದಿನ ವಾರ (ಸೆಪ್ಟೆಂಬರ್ 7) ಬಿಡುಗಡೆಯಾಗುತ್ತಿದೆ. ನಟಿ ಶೀಘ್ರದಲ್ಲೇ ಕಥನಾರ್ ಸೆಟ್ಗೆ ಸೇರುವ ಎಲ್ಲಾ ನಿರೀಕ್ಷೆಗಳಿವೆ.