ನ್ಯೂಸ್ ನಾಟೌಟ್: ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ. ಅನೇಕ ಸಂಸ್ಥೆಗಳಲ್ಲಿ ಇಂದಿಗೂ ಸಿಬ್ಬಂದಿಗೆ ಸೀರೆ ತೊಡುವುದನ್ನು ಕಡ್ಡಾಯಗೊಳಿಸಿದೆ. ಆದರೆ ಏರ್ ಇಂಡಿಯಾ ತನ್ನ ಸಂಸ್ಥೆಗಳಿಗೆ ಸೀರೆ ಬದಲು ಹೊಸ ಧಿರಿಸು ನೀಡುವುದಕ್ಕೆ ನಿರ್ಧರಿಸಿದೆ.
ಹೌದು, ಏರ್ ಇಂಡಿಯಾ (Air India) ಸುಮಾರು 60 ವರ್ಷಗಳ ಕಾಲ ಭಾರತೀಯ ಸಾಂಪ್ರದಾಯಿಕ ಉಡುಪು ಸೀರೆಯಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಇನ್ನು ಮುಂದೆ ಹೊಸ ರೀತಿಯ ಉಡುಗೆ ಸಿಗಲಿದೆ ಎಂದು ತಿಳಿಸಿದೆ. ವರ್ಷಾಂತ್ಯದಲ್ಲಿ ಸಮವಸ್ತ್ರ (uniform) ಬದಲಾಗಲಿದೆ ಎಂದು ಮೂಲಗಳು ತಿಳಿಸಿವೆ. ಸಹಜವಾಗಿಯೇ ಇದು ಅಭಿಮಾನಿಗಳಿಗೆ ನಿರಾಸೆ ತರುವ ಸಾಧ್ಯತೆ ಇದೆ.
ಕಳೆದ 6 ದಶಕಗಳ ಕಾಲ ಸೀರೆ ಧರಿಸಿಕೊಂಡು ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಇನ್ನು ಮುಂದೆ ಆಧುನಿಕ ಉಡುಗೆ ಮೂಲಕ ಕಾಣಿಸಿಕೊಳ್ಳಲಿರುವುದು ಖಚಿತವಾಗಿದೆ. ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರ ಹೊಸ ಸಮವಸ್ತ್ರದ ವಿನ್ಯಾಸ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯ ಅವರು ನಾನ್ ಡಿಸ್ಕ್ಲೋಷರ್ ಅಗ್ರಿಮೆಂಟ್ (NDA) ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೀಗಾಗಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದಾಗ್ಯೂ ಹೊಸ ಸಮವಸ್ತ್ರ ಸಾಂಪ್ರದಾಯಿಕವಾಗಿಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಬೆಳವಣಿಗೆ ಪ್ರಕಾರ ಸೀರೆಯನ್ನು ಸಮವಸ್ತ್ರದ ಪಟ್ಟಿಯಿಂದ ಸಂಪೂರ್ಣ ಹೊರಗಿಡಲಾಗುತ್ತದೆ. ಮಹಿಳೆಯರಿಗೆ ಚೂಡಿದಾರ್ ಮತ್ತು ಪುರುಷ ಸಿಬ್ಬಂದಿಗೆ ಸೂಟ್ ಸಮವಸ್ತ್ರವಾಗಿ ದೊರೆಯುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ ಇನ್ನೊಬ್ಬ ಅಧಿಕಾರಿಯ ಪ್ರಕಾರ, ಸೀರೆಯನ್ನು ಸಂಪೂರ್ಣವಾಗಿ ಸಮವಸ್ತ್ರದಿಂದ ಹೊರಗಿಡಲಾಗುವುದಿಲ್ಲವಂತೆ. “ವಿಮಾನಯಾನ ಸಂಸ್ಥೆಗೆ ಸಮವಸ್ತ್ರವಾಗಿ ವಿವಿಧ ಆಯ್ಕೆಗಳನ್ನು ನೀಡಲಾಯಿತು. ಅದರಲ್ಲಿ ಸೀರೆಯಂತೆ ಕಾಣುವ ಆದರೆ ಸಾಂಪ್ರದಾಯಿಕ ಸೀರೆಗಳಿಗಿಂತ ಭಿನ್ನವಾದ ಸೀರೆಗಳಿಗೆ ಒಪ್ಪಿಗೆ ಸೂಚಿಸಿತ್ತು. ಆದಾಗ್ಯೂ, ಅವುಗಳನ್ನು ಆಡಳಿತ ಮಂಡಳಿ ಅಂತಿಮಗೊಳಿಸಿಲ್ಲʼʼ ಎಂದು ಅವರು ತಿಳಿಸಿದ್ದಾರೆ.