ನ್ಯೂಸ್ ನಾಟೌಟ್: ತಮಿಳು ನಟ ಸಿದ್ದಾರ್ಥ್ ಅವರ ನಟನೆಯ ‘ಚಿಕ್ಕು’ ಸಿನಿಮಾ (Chikku Movie) ಸೆಪ್ಟೆಂಬರ್ 28ರಂದು ರಿಲೀಸ್ ಆಗಿದೆ. ಈ ಸಿನಿಮಾದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಸದಸ್ಯರು ಆಗಮಿಸಿ, ತಡೆದಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಹಲವರು ಕರವೇ ಸಂಘಟನೆಯ ಕ್ರಮವನ್ನು ಬೆಂಬಲಿಸಿದ್ದಾರೆ. ಇನ್ನೂ ಕೆಲವರು ಇದು ತಪ್ಪು ಎಂದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ಟ್ವೀಟ್ ಒಂದನ್ನು ಮಾಡಿದ್ದು, ನಟ ಸಿದ್ದಾರ್ಥ್ ಬಳಿ ಕ್ಷಮೆ ಕೇಳಿದ್ದಾರೆ.
‘ಕಾವೇರಿ ನಮ್ಮದು. ಹೌದು, ನಮ್ಮದೇ.. ಆದರೆ, ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು, ನಾಯಕರನ್ನು ಪ್ರಶ್ನಿಸದೇ, ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ, ಹೀಗೆ ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹೃದಯ ಕನ್ನಡಿಗರ ಪರವಾಗಿ ಕ್ಷಮಿಸಿ’ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ, ಈಗ ಈ ಟ್ವೀಟ್ ಎಲ್ಲೆಡೆ ಸುದ್ದಿಯಾಗುತ್ತಿದೆ.
‘ಚಿಕ್ಕು’ ಸಿನಿಮಾದಲ್ಲಿ ಸಿದ್ದಾರ್ಥ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ನಿಮಿಷಾ ಸಂಜಯ್, ಅಂಜಲಿ ನಾಯರ್ ಮೊದಲಾದವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಎಸ್ಯು ಅರುಣ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಸಿದ್ದಾರ್ಥ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತಮಿಳಿನ ಈ ಸಿನಿಮಾ ಕನ್ನಡ ಮೊದಲಾದ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ, ಈಗ ಪ್ರಕಾಶ್ ರಾಜ್ ತಮಿಳು ನಾಡಿನ ನಿಲುವನ್ನು ಸಮರ್ಥಿಸಿಕೊಂಡರಾ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಹಲವರು ಪರ ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ.