ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ದುರಂತ ಅಂತ್ಯ ಕಂಡಿದ್ದ ವ್ಯಕ್ತಿಯೊಬ್ಬರ ಕುಟುಂಬಕ್ಕೆ 2.25 ಕೋಟಿ ರೂ. ಪರಿಹಾರ ನೀಡುವಂತೆ ಆದೇಶ ನೀಡಲಾಗಿದೆ. ಮಡಿಕೇರಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ಮೋಟಾರು ಅಪಘಾತಗಳ ಕ್ಲೇಮ್ಸ್ ಟ್ರಿಬ್ಯೂನಲ್(MACT) ವಿಮಾ ಕಂಪನಿಗೆ ಆದೇಶಿಸಿದೆ.
ಲೋಕ ಅದಾಲತ್ ಇತ್ಯರ್ಥದ ಸಂದರ್ಭದಲ್ಲಿ ಈ ಬಗ್ಗೆ ತೀರ್ಪು ನೀಡಲಾಗಿದೆ. ಪ್ರಕರಣದ ಆರೋಪಿಯ ಮೋಟಾರು ವಾಹನದ ವಿಮಾ ಕಂಪನಿಯು ಎರಡು ತಿಂಗಳಲ್ಲಿ ಪರಿಹಾರ ನೀಡಲು ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.ಅಪಘಾತದಲ್ಲಿ ಉಸಿರು ಚೆಲ್ಲಿದ್ದ ಅಚಲ್ ಬೋಪಣ್ಣ(34) ಅವರು ಕೊಡಗು ನಿವಾಸಿಯಾಗಿದ್ದರು. ಹಾಂಕಾಂಗ್ನ ಆಂಗ್ಲೋ-ಈಸ್ಟರ್ನ್ ಶಿಪ್ ಮ್ಯಾನೇಜ್ಮೆಂಟ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಇದಲ್ಲದೇ ಆ ವ್ಯಕ್ತಿ ಕಂಪನಿಯಲ್ಲಿ ಕ್ಯಾಪ್ಟನ್ ಆಗಿ ನೇಮಿಸಲ್ಪಟ್ಟಿದ್ದರು.
2017ರ ಡಿಸೆಂಬರ್ನಲ್ಲಿ ನಡೆದ ಘಟನೆಯಿದು. ಮೂಡಿಗೆರೆಯಿಂದ ಕೊಡಗು ಕಡೆಗೆ ತೆರಳುತ್ತಿದ್ದ ಅಚಲ್ ಅವರು ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಬರುತ್ತಿದ್ದಂತೆ ಅಪಘಾತಕ್ಕೀಡಾಗಿದ್ದರು. ಆರೋಪಿ ಅಯ್ಯಪ್ಪ ಚಲಾಯಿಸುತ್ತಿದ್ದ ಪಿಕಪ್ ವಾಹನವು ಅಚಲ್ ಚಲಾಯಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.ಈ ವೇಳೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಚಲ್ ಅವರು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾರದ ಲೋಕಕ್ಕೆ ತೆರಳಿದ್ದರು.
ಇದಾದ ಬಳಿಕ ಅಚಲ್ ಅವರ ತಾಯಿ ಅನಿಲಾ ಎಜಿ ಮತ್ತು ಪತ್ನಿ ಸ್ಪೂರ್ತಿ ಅವರು ಪ್ರತಿವಾದಿಗಳಿಂದ ಪರಿಹಾರಕ್ಕಾಗಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.ಆರೋಪಿ ಅಯ್ಯಪ್ಪ ಮತ್ತು ಆರೋಪಿಯ ಮೋಟಾರು ವಾಹನದ ವಿಮಾ ಕಂಪನಿ – ಚೋಳಮಂಡಲಂ ಜನರಲ್ ಇನ್ಶುರೆನ್ಸ್ ಕಂಪನಿ ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದರು.
2018ರಿಂದ ಮಡಿಕೇರಿಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ವರ್ಷ ಸೆಪ್ಟೆಂಬರ್ 9ರಂದು ನಡೆದ ಲೋಕ ಅದಾಲತ್ ನಲ್ಲಿ ಇತ್ಯರ್ಥಪಡಿಸಲಾಗಿತ್ತು. ಪರಿಹಾರಕ್ಕಾಗಿ ಎರಡು ಪ್ರಕರಣಗಳನ್ನು ಸಂಯೋಜಿಸುವಂತೆ ಪೀಠ ಸೂಚಿಸಿತ್ತು. ಅಂತೆಯೇ, ಅರ್ಜಿದಾರರಾದ ಅನಿಲಾ ಮತ್ತು ಸ್ಪೂರ್ತಿ ಅವರು 3 ಕೋಟಿ ರೂ. ಪರಿಹಾರ ಕೋರಿದ್ದರು. ಅವರ ಪರವಾಗಿ ವಕೀಲರಾದ ಬಿಬಿ ಆನಂದ್ ಮತ್ತು ರತನ್ ತಮ್ಮಯ್ಯ ಅವರು ವಾದಿಸಿದ್ದರು.ಪ್ರಕರಣದ ವಿಚಾರಣೆಯ ನಂತರ, ನ್ಯಾಯಾಧೀಶ ಪ್ರಶಾಂತ್ ಜಿ ಅವರು ಸಂತ್ರಸ್ತೆಯ ಕುಟುಂಬಕ್ಕೆ 2.25 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಚೋಳಮಂಡಲಂ ಜನರಲ್ ಇನ್ಶುರೆನ್ಸ್ ಕಂಪನಿಗೆ ಆದೇಶಿಸಿದ್ದಾರೆ.
“ಇದೊಂದು ಅಪರೂಪದ ಪ್ರಕರಣವಾಗಿದೆ. ಅಚಲ್ ಮಾಸಿಕವಾಗಿ 4 ಲಕ್ಷ ರೂ.ವರೆಗೆ ವೇತನ ಪಡೆಯುತ್ತಿದ್ದು, 34 ವರ್ಷಕ್ಕೆ ಕಣ್ಣು ಮುಚ್ಚಿದ ಅಚಲ್ ಅವರ ಉಳಿದ ಕೆಲಸದ ವರ್ಷಗಳಿಗೆ ಪರಿಹಾರದ ಮೊತ್ತವನ್ನು ಲೆಕ್ಕ ಹಾಕಲಾಯಿತು,” ಎಂದು ಪ್ರಕರಣದಲ್ಲಿ ವಿಮಾ ಕಂಪನಿಯನ್ನು ಪ್ರತಿನಿಧಿಸುವ ಬಿ.ಡಿ.ದಯಾನಂದ ಅವರು ಹೇಳಿದ್ದಾರೆ. ವಿಮಾ ಕಂಪನಿಯು ಪರಿಹಾರದ ಮೊತ್ತವನ್ನು ಎರಡು ತಿಂಗಳಲ್ಲಿ ಪಾವತಿಸಲು ಆದೇಶಿಸಲಾಗಿದೆ ಮತ್ತು ತಪ್ಪಿದರೆ ಅದಕ್ಕೆ ಬಡ್ಡಿ ಮೊತ್ತವನ್ನು ಸೇರಿಸಲಾಗುವುದು ಎಂದು ಹೇಳಲಾಗಿದೆ.