ನ್ಯೂಸ್ ನಾಟೌಟ್: ತನಗೆ ಈ ಮೊದಲೇ ಮದುವೆಯಾಗಿದ್ದರೂ ಇನ್ನೊಬ್ಬಾಕೆಯ ಜೊತೆಗೆ ವಿವಾಹಕ್ಕೆ ಮುಂದಾಗಿದ್ದ ಯುವಕನನ್ನು ಜನರು ಹಿಡಿದು, ಕೊರಳಲ್ಲಿ ಚಪ್ಪಲಿ, ಶೂಗಳ ಹಾರ ಹಾಕಿ ಮೆರವಣಿಗೆ ಮಾಡಿಸಿದ ಘಟನೆ ಉತ್ತರಪ್ರದೇಶದ ಬುಲಂದ್ಶಹರ್ನಲ್ಲಿ ಇಂದು (ಸೆ.13)ನಡೆದಿದೆ.
ತಾನು ಈ ಹಿಂದೆ ಪ್ರೀತಿಸುತ್ತಿದ್ದ ಯುವತಿಯ ಜೊತೆಗೆ ಆರೋಪಿ ವಿವಾಹವಾಗಿದ್ದ ಎನ್ನಲಾಗಿದ್ದು, ಆದರೆ, ಯಾರ ಗಮನಕ್ಕೂ ಬಾರದಂತೆ ರಹಸ್ಯವಾಗಿ ಮತ್ತೊಂದು ಮದುವೆಯಾಗಲು ಎಲ್ಲಾ ಸಿದ್ದತೆ ನಡೆಸಿದ್ದ. ಆತನಿಗೆ ಗೆಳತಿ ಮದುವೆ ನಿಲ್ಲಿಸುವಂತೆ ಎಚ್ಚರಿಸಿದ್ದಾಳೆ ಆದರೂ, ಆರೋಪಿ ವಿವಾಹಕ್ಕೆ ಮುಂದಾದಾಗ ಆಕೆಯೇ ಬಂದು ರಂಪಾಟ ನಡೆಸಿದ್ದಾಳೆ ಎನ್ನಲಾಗಿದೆ.
ಉತ್ತರ ಪ್ರದೇಶದ ಬುಲಂದ್ಶಹರ್ ನಿವಾಸಿಯಾದ ಆರೋಪಿ ಯುವಕ ಪಕ್ಕದ ಪಹಸು ಗ್ರಾಮದ ಯುವತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ವರದಕ್ಷಿಣೆಯಾಗಿ ವರನಿಗೆ 1 ಲಕ್ಷ 40 ಸಾವಿರ ರೂಪಾಯಿ ನೀಡಲಾಗಿತ್ತು. ಮದುವೆಗೆ ಸಕಲ ಸಿದ್ಧತೆ ನಡೆಸುತ್ತಿದ್ದಾಗ ಬೇರೆ ಊರಿನಲ್ಲಿ ಮದುವೆಯಾಗಿದ್ದ ಆತನ ಮೊದಲ ಲವರ್ ಗೆ ಗೊತ್ತಾಗಿದೆ. ಆಕೆಯೇ ಯುವಕನ ಮನೆಗೆ ಆಗಮಿಸಿ ತಕರಾರು ತೆಗೆದಿದ್ದಾಳೆ. ನಾನು ಈತನ ಮೊದಲ ಪತ್ನಿ ಎಂದು ಹೇಳಿದ್ದಾಳೆ. ಇದಕ್ಕೆ ಪುರಾವೆಯಾಗಿ ತನ್ನ ಮೊಬೈಲ್ನಲ್ಲಿದ್ದ ವಿಡಿಯೋ ಮತ್ತು ಫೋಟೋಗಳನ್ನು ತೋರಿಸಿದ್ದಾಳೆ ಎನ್ನಲಾಗಿದೆ.
ತಕ್ಷಣವೇ ವಿಷಯ ಹರಡಿ, ಇನ್ನೊಬ್ಬ ಯುವತಿಯ ಮನೆಯವರಿಗೂ ತಿಳಿದಿದೆ. ಯುವಕನ ಮನೆಗೆ ಬಂದ ಜನರು ಪಂಚಾಯ್ತಿ ನಡೆಸಿದ್ದಾರೆ. ಆದರೆ, ಪಂಚಾಯಿತಿಯಲ್ಲಿ ಯುವಕ ತನಗೆ ಮದುವೆಯಾಗಿದ್ದನ್ನು ನಿರಾಕರಿಸಿ ವಾದಿಸಿದ್ದ. ಅಲಿಘಡದ ಮೊದಲ ಯುವತಿ ಧ್ವನಿಮುದ್ರಿಕೆಯನ್ನು ಲೌಡ್ ಸ್ಪೀಕರ್ ಮೂಲಕ ಸಭೆಗೆ ಕೇಳಿಸಿದ್ದಾಳೆ. ಆಗ ಯುವಕನ ಮುಖವಾಡ ಕಳಚಿ ಬಿದ್ದಿದೆ ಎನ್ನಲಾಗಿದೆ.
ಯುವಕನಿಗೆ ಮೊದಲೇ ಮದುವೆಯಾಗಿದ್ದು ತಿಳಿದ ಜನರು ಆಕ್ರೋಶ ವ್ಯಕ್ತಪಡಿಸಿದರು. ಯುವಕನನ್ನು ಹೊರಗೆ ಎಳೆದು ತಂದು ಆತನ ಕೊರಳಿಗೆ ಶೂ ಮತ್ತು ಚಪ್ಪಲಿಯ ಹಾರ ಹಾಕಿ ಮೆರವಣಿಗೆ ಮಾಡಿಸಿದ್ದಾರೆ. ಇದರೊಂದಿಗೆ ವರದಕ್ಷಿಣೆಯಾಗಿ ನೀಡಿದ್ದ 1.40 ಲಕ್ಷ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾರೆ.
ಜನರಿಂದ ಅವಮಾನಿತನಾದ ಯುವಕ ಪೊಲೀಸ್ ಠಾಣೆಗೆ ತಾನೇ ದೂರು ನೀಡಿದ್ದಾನೆ. ಯುವಕನ ಕುಟುಂಬದವರ ದೂರಿನ ಮೇರೆಗೆ 4 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.