ನ್ಯೂಸ್ ನಾಟೌಟ್: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಗೆ ಸೇರಿದ ವಿದ್ಯುತ್ ಉಚಿತ ಬಸ್ ತಿರುಮಲದಲ್ಲಿ ಕಳ್ಳತನವಾಗಿದೆ. ಬಸ್ ಸಿಗದ ಕಾರಣ ಗಾಬರಿಗೊಂಡ ಸಿಬ್ಬಂದಿ ಟಿಟಿಡಿ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ಜಿಪಿಎಸ್ ಸಹಾಯದಿಂದ ಬಸ್ ಅನ್ನು ಪತ್ತೆಹಚ್ಚಿದ್ದಾರೆ ಎಂದು ವರದಿ ತಿಳಿಸಿದೆ.
ಬೆಳಗ್ಗೆಯಿಂದ ಟಿಟಿಡಿ ಡಿಪೋದಲ್ಲಿ ಉಚಿತ ಬಸ್ ಕಾಣದೆ ಇರುವ ಕಾರಣ ಸಿಬ್ಬಂದಿ ತಿರುಮಲದ ಎಲ್ಲಾ ಪ್ರದೇಶಗಳನ್ನು ಪರಿಶೀಲಿಸಿ ಬಸ್ ಕಳ್ಳತನವಾಗಿರುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಕುರಿತು ತಿರುಮಲ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ಭಾನುವಾರ ಬೆಳಗಿನ ಜಾವ 3.30ಕ್ಕೆ ಡಿಪೋದಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಬಸ್ ಅನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಈ ಬಸ್ಸಿನ ಮೌಲ್ಯ ರೂ.2 ಕೋಟಿ ರೂಪಾಯಿ ಎಂದು ಟಿಟಿಡಿ ತಿಳಿಸಿದೆ.
ಟಿಟಿಡಿ ವಿದ್ಯುತ್ ಉಚಿತ ಬಸ್ ಕಳ್ಳತನವಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಟಿಟಿಡಿಗೆ ಸೇರಿದ ಬ್ಯಾಟರಿ ವಾಹನವನ್ನು ಅಪರಿಚಿತರು ಕಳ್ಳತನ ಮಾಡಿದ್ದರು. ವಾಹನದ ಬ್ಯಾಟರಿ ಚಾರ್ಜ್ ಖಾಲಿಯಾದ ಕಾರಣ ವಾಹನವನ್ನು ಕಡಪ ಜಿಲ್ಲೆಯ ಒಂಟಿಮಿಟ್ಟದಲ್ಲಿ ಬಿಡಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಿಪಿಎಸ್ ಆಧಾರದ ಮೇಲೆ ಬಸ್ ಚಲನವಲನ ಪತ್ತೆ ಹಚ್ಚಿದ್ದಾರೆ. ತಿರುಪತಿ ಜಿಲ್ಲೆಯ ನಾಯ್ಡುಪೇಟೆಯಲ್ಲಿ ಉಚಿತ ಬಸ್ ಇರುವುದನ್ನು ಕ್ರೈಂ ಪೊಲೀಸರು ಪತ್ತೆ ಮಾಡಿದ್ದಾರೆ.
ಬಸ್ನ ಚಾರ್ಜ್ ಖಾಲಿಯಾದ ಕಾರಣ ಕಳ್ಳರು ಬಸ್ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಮತ್ತು ಟಿಟಿಡಿ ಸಿಬ್ಬಂದಿ ಬಸ್ ವಾಪಸ್ ತರಲು ಪ್ರಯತ್ನಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬಸ್ ಕೊಂಡೊಯ್ದ ಕಳ್ಳನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.