ನ್ಯೂಸ್ ನಾಟೌಟ್ : ತಮಿಳು ನಟ ರಜನಿಕಾಂತ್ ಶನಿವಾರ ಲಕ್ನೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ.
ಸೂಪರ್ಸ್ಟಾರ್ ತಮ್ಮ ಇತ್ತೀಚಿನ ಬ್ಲಾಕ್ಬಸ್ಟರ್ ‘ಜೈಲರ್’ ಚಿತ್ರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವೀಕ್ಷಿಸಲಿದ್ದಾರೆ ಎನ್ನಲಾಗಿದ್ದು, “ನಾನು ಸಿಎಂ ಜೊತೆ ಸಿನಿಮಾ ನೋಡುತ್ತೇನೆ. ಚಿತ್ರ ಹಿಟ್ ಆಗುತ್ತಿರುವುದು ದೇವರ ಆಶೀರ್ವಾದ” ಎಂದು ರಜನಿಕಾಂತ್ ಲಕ್ನೋಗೆ ಭೇಟಿ ನೀಡುವ ಮೊದಲು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಲಕ್ನೋದಲ್ಲಿ ‘ಜೈಲರ್’ ವಿಶೇಷ ಪ್ರದರ್ಶನ ನಡೆದಿದ್ದು, ಆದಿತ್ಯನಾಥ್ ಉಪನಾಯಕ ಕೇಶವ್ ಪ್ರಸಾದ್ ಮೌರ್ಯ ಭಾಗವಹಿಸಿದ್ದರು. “ನನಗೂ ‘ಜೈಲರ್’ ಸಿನಿಮಾ ನೋಡುವ ಅವಕಾಶ ಸಿಕ್ಕಿತು. ನಾನು ರಜನಿಕಾಂತ್ ಅವರ ಅನೇಕ ಚಿತ್ರಗಳನ್ನು ನೋಡಿದ್ದೇನೆ ಮತ್ತು ಅವರೊಬ್ಬ ಪ್ರತಿಭಾನ್ವಿತ ನಟ. ತಮ್ಮ ಅಭಿನಯದಿಂದ ಚಿತ್ರದ ಮಹತ್ವ ಹೆಚ್ಚಿಸಿದ್ದಾರೆ” ಎಂದು ಹೇಳಿದ್ದಾರೆ.
72 ವರ್ಷದ ಸೂಪರ್ ಸ್ಟಾರ್ ಭಾನುವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಯುಪಿ ಭೇಟಿಗೂ ಮುನ್ನ ರಜನಿಕಾಂತ್ ಜಾರ್ಖಂಡ್ನಲ್ಲಿದ್ದರು. ರಾಜ್ಯದ ಪ್ರಸಿದ್ಧ ಚಿನ್ನಮಸ್ತ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಹರಕೆ ತೀರಿಸಿದರು. ರಾಂಚಿಯ ‘ಯಗೋಡ ಆಶ್ರಮ’ದಲ್ಲಿ ಒಂದು ಗಂಟೆ ಧ್ಯಾನವನ್ನೂ ಮಾಡಿದರು. ಇದಾದ ನಂತರ ಅವರು ಜಾರ್ಖಂಡ್ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರನ್ನು ರಾಜಭವನದಲ್ಲಿ ಭೇಟಿಯಾದರು. ಈ ವರೆಗೆ ಜೈಲರ್ ಸಿನಿಮಾ 8 ದಿನಗಳಲ್ಲಿ ₹ 235.65 ಕೋಟಿ ಕಲೆಕ್ಷನ್ ಮಾಡಿದೆ.