ನ್ಯೂಸ್ ನಾಟೌಟ್: ಇಲ್ಲಿ ಮಹಿಳೆಯರ ಜಾತ್ರೆಯೊಂದು ನಡೆಯುತ್ತದೆ. ಈ ಜಾತ್ರೆಯಲ್ಲಿ ಮಹಿಳೆಯರಿಗಷ್ಟೇ ವಿಶೇಷವಾದ ಪ್ರಾತಿನಿಧ್ಯ ಇರುತ್ತದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ನಡೆಯುವ ಜಾತ್ರೆಯಲ್ಲಿ ಮಹಿಳೆಯರಿಗೆ ಹಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತದೆ.
ಮಹಿಳೆಯರೇ ಈ ಜಾತ್ರೆಯ ಕೇಂದ್ರ ಬಿಂದು. ಸಾಮಾನ್ಯವಾಗಿ ಯಾವುದೇ ಜಾತ್ರೆಗಳು ನಡೆದರೆ ಅಲ್ಲಿನ ಬಹುತೇಕ ಜವಾಬ್ದಾರಿಗಳು ಗಂಡಸರೇ ವಹಸಿಕೊಂಡಿರುತ್ತಾರೆ. ಆದರೆ, ಗದಗ ಜಿಲ್ಲೆ ಹಾಲಕೇರಿಯಲ್ಲಿ ಶ್ರೀ ಅನ್ನದಾನೇಶ್ವರ ಮಠದ ಜಾತ್ರೆಯನ್ನ ಮಹಿಳೆಯರು ಮಾಡುತ್ತಾರೆ.
ಇಲ್ಲಿ ಪುರುಷರಿಗೆ ಅವಕಾಶವೇ ಇರುವುದಿಲ್ಲ. ಸುಮಾರು ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಜಾತ್ರೆ ವೇಳೆ ಇಲ್ಲಿನ ಮಠದ ಬೆಳ್ಳಿರಥವನ್ನು ಪ್ರತಿ ವರ್ಷ ಮಹಿಳೆಯರೇ ಎಳೆದು ಸಂಭ್ರಮಿಸುತ್ತಾರೆ. ಗದಗ ಜಿಲ್ಲೆಯಲ್ಲಿ ನಡೆಯುವ ಈ ಜಾತ್ರೆ ಉತ್ತರ ಕರ್ನಾಟಕದಲ್ಲೇ ವಿಶೇಷವಾದದ್ದು, ಈ ವಿಶೇಷ ಜಾತ್ರೆಗೆ ಸುತ್ತ ಮುತ್ತಲ ಗ್ರಾಮಗಳಿಂದಲೂ ಜನ ಬಂದು ಸಂಭ್ರಮಿಸುತ್ತಾರೆ. ಗದಗದಿಂದ 40 ಕಿಮೀ ದೂರದಲ್ಲಿರುವ ಗ್ರಾಮದಲ್ಲಿ ಪ್ರತಿ ವರ್ಷ 500 ಕ್ಕೂ ಹೆಚ್ಚು ಮಹಿಳಾ ಸಾಧಕರನ್ನು, ವಿದ್ಯಾರ್ಥಿ ಟಾಪರ್ಗಳನ್ನು ಮಠವು ಸನ್ಮಾನಿಸುತ್ತದೆ.
ಮಹಿಳೆಯರು 165 ಕೆಜಿ ತೂಕದ ಬೆಳ್ಳಿ ರಥ ಎಳೆಯುವ ಆಚರಣೆಯು 2005 ರಲ್ಲಿ ಪ್ರಾರಂಭವಾಯಿತು, ಲಿಂಗೈಕ್ಯ ಅಭಿನವ ಅನ್ನದಾನ ಸ್ವಾಮೀಜಿಯವರು ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದರು. ಎಲ್ಲೆಡೆ ಜಾತ್ರೆಗಳು ನಡೆಯುವಾಗ ಪುರುಷರು ಮಾತ್ರ ರಥವನ್ನು ಎಳೆಯುತ್ತಾರೆ. ಆದರೆ. ಕುಟುಂಬದ ರಥವನ್ನು ಎಳೆಯುವ ತಾಯಂದಿರಿಗೆ ಎಲ್ಲಿಯೂ ಈ ರೀತಿಯ ಅವಕಾಶವಿಲ್ಲ ಎಂಬ ಯೋಚನೆಯಿಂದ ಉಡುಪಿಯಲ್ಲಿ 165ಕೆಜಿ ಭಾರದ ಬೆಳ್ಳಿ ತೇರನ್ನು 2005ರಲ್ಲಿ ಮಾಡಿಸಿದರು.
ಇದು ರಾಜ್ಯದಲ್ಲೇ ಮೊದಲ ಬಾರಿಗೆ ಮಹಿಳೆಯರಿಂದ ಎಳೆಯಲ್ಪಡುವ ಬೆಳ್ಳಿ ತೇರು ಎಂಬ ಹೆಗ್ಗಳಿಕೆ ಪಾತ್ರವಾಯಿತು.
ಇದರಂತೆ ಪ್ರತಿವರ್ಷ ಲಿಂ. ಗುರು ಅನ್ನದಾನ ಸ್ವಾಮಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆಯುವ ಜಾತ್ರೆಯಲ್ಲಿ ಮಹಿಳಾ ಸಾಧಕಿಯರೇ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ರಾಜ್ಯದ ಮೂಲೆ, ಮೂಲೆಯಿಂದ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಇದೇ ಜಾತ್ರೆಯಲ್ಲಿ ಮಹಿಳಾಗೋಷ್ಠಿಗಳು, ಮಹಿಳಾ ಸಾಧಕಿಯರಿಂದ ಉಪನ್ಯಾಸ, ಸನ್ಮಾನ ಹಾಗೂ ಹಿರಿಯ ತಾಯಂದಿರಿಗೆ ಸನ್ಮಾನದಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆಯುತ್ತವೆ.