ನ್ಯೂಸ್ ನಾಟೌಟ್ : 14 ವರ್ಷದ ಬಾಲಕನೊಬ್ಬನಿಗೆ (Snake haunts 14 Year old boy) ಸರ್ಪವೊಂದು ಎಡೆಬಿಡದೆ ಕಾಡುತ್ತಿರುವ (Snake bite)ವಿಶೇಷ ಘಟನೆಯೊಂದು ನಡೆದಿದೆ. ಎಷ್ಟೆಂದರೆ ಎರಡು ತಿಂಗಳಲ್ಲಿ ಒಂಬತ್ತು ಬಾರಿ ಹಾವು ಕಡಿದಿದೆ (Snake bites 9 times in two months) ಅಂದ್ರೆ ನೀವು ನಂಬಲೇ ಬೇಕು.ಆದರೆ ಹುಡುಗನಿಗೆ ಏನೂ ಆಗಿಲ್ಲವಂತೆ..!
ಇನ್ನು ವಿಶೇಷವೆಂದರೆ ಕಡಿಯೋ ಹಾವು ಅವನಿಗೆ ಬಿಟ್ಟರೆ ಬೇರೆ ಯಾರಿಗೂ ಕಾಣಿಸಿಲ್ಲ. ಏನಿದು ವಿಚಿತ್ರ? ಎಲ್ಲಿ ನಡೀತು ಅಂತೀರಾ? ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಹಲಕಟ್ಟಿ ಗ್ರಾಮ ಈ ಘಟನೆಗೆ ಸಾಕ್ಷಿಯಾಗಿದೆ. ಕಳೆದ ಕೆಲವು ಸಮಯದಿಂದ ಈ ಘಟನೆ ನಡೆದಿದ್ದು,ಒಂದೆರಡು ದಿನದ ಹಿಂದಷ್ಟೇ ಹಾವು ಒಂಬತ್ತನೇ ಬಾರಿಗೆ ಹುಡುಗನಿಗೆ ಕಡಿದಿದೆ ಎನ್ನಲಾಗಿದೆ.
ಈ ರೀತಿ ಪದೇಪದೇ ಹಾವು ಕಡಿತಕ್ಕೆ ಒಳಗಾಗುತ್ತಿರುವ ಈ ಹುಡುಗ ಹಲಕಟ್ಟಿ ಗ್ರಾಮದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್. ಒಂದೇ ರೀತಿಯ ಸರ್ಪದಿಂದ ಒಂಬತ್ತು ಬಾರಿ ಕಡಿತಕ್ಕೊಳಗಾದ ಹುಡುಗ ಈಗ ನಿದ್ದೆಯಲ್ಲೂ ಹಾವು ಹಾವು ಎಂದು ಬೆಚ್ಚಿ ಬೀಳುತ್ತಿದ್ದಾನೆ.ಪ್ರಜ್ವಲ್ ಹೊರಗಡೆ ಹೋದಾಗ ತಕ್ಷಣ ಹಾವು ಕಚ್ಚಿತು ಎಂದು ಓಡಿ ಬರುತ್ತಾನೆ. ಹಾವು ಕಚ್ಚಿದ ತಕ್ಷಣ ಮೈ ಮೇಲೆ ಹಾವಿನ ಹಲ್ಲಿನ ಗುರುತು ಕಾಣುತ್ತದೆ. ರಕ್ತವೂ ಸಹ ಬರುತ್ತದೆ.
ಕಚ್ಚಿದ ಹಾವು ಆ ಬಾಲಕನಿಗೆ ಬಿಟ್ಟು ಬೇರಾರಿಗೂ ಕಾಣಿಸುವುದಿಲ್ಲ! ಹಾವು ಕಡಿದ ಬಳಿಕ ಬೇವಿನ ಎಲೆ ತಿಂದರೂ ಕಹಿಯಾಗೋದಿಲ್ಲ. ಮೆಣಸಿನ ಪುಡಿ ತಿಂದರೂ ಖಾರವೇ ಇಲ್ಲ. ಹಾವು ಕಡಿದಿದ್ದು ಮೂರು ಬಾರಿ ಅವನದೇ ಮನೆಯಲ್ಲಿ.ಇನ್ನು ಅದೇ ಗ್ರಾಮದ ಅಜ್ಜಿಯ ಮನೆಯಲ್ಲಿ ಆರು ಬಾರಿ ಹಾವು ಕಡಿತವಾಗಿದೆ. ಹೀಗೆ ಹಾವು ಕಡಿದ ಒಂಬತ್ತು ಸಲವೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಪೋಷಕರು ಮಗನ ಈ ಸಮಸ್ಯೆಗಾಗಿ ಊರೂರು ಅಲೆದಾಡಿದ್ದಾರೆ. ದೇವರ ಮೊರೆ ಹೋಗಿದ್ದಾರೆ.ಕಂಡ ಕಂಡ ದೇವರಿಗೆ ಹರಕೆ ತೀರಿಸಿದ್ದೂ ಆಗಿದೆ. ನಾಗದೋಷಕ್ಕಾಗಿ ಪೂಜೆಯನ್ನೂ ಮಾಡಿಸಿದ್ದಾರೆ. ತಾವಿರುವ ಜಾಗದ ಹೊಲದಲ್ಲಿಯೇ ಮನೆ ದೇವತೆಯ ಪುಟ್ಟ ಗುಡಿಯನ್ನೂ ನಿರ್ಮಿಸಿದ್ದಾರೆ. ಆದರೂ ಬೆಂಬಿಡದೇ ಕಾಡುತ್ತಿದ್ದಾನೆ ನಾಗಪ್ಪ. ಒಂದೆರಡು ದಿನದ ಹಿಂದೆ ಒಂಬತ್ತನೇ ಬಾರಿ ಮತ್ತೆ ಹಾವು ಕಡಿತವಾದ ಬಳಿಕ ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗನಿಗೆ ಈ ಹಾವಿನ ಕಡಿತದಿಂದ ಒಮ್ಮೆ ಮುಕ್ತಿ ಸಿಗಲಪ್ಪ ಎಂದು ಬೇಡುತ್ತಿದ್ದಾರೆ ಪಾಲಕರು.ಸದ್ಯ ಉತ್ತರಿಸಲಾಗದ ಈ ಪ್ರಶ್ನೆ ಇನ್ನೂ ನಿಗೂಢವಾಗಿದೆ.ಕಾಲವೇ ಉತ್ತರ ಕೊಡಬೇಕಷ್ಟೇ.