ನ್ಯೂಸ್ ನಾಟೌಟ್ : ಅತ್ತೆ ಸೊಸೆ ಅಂದ್ರೆ ಹಾವು ಮುಂಗುಸಿ ತರಹ ಅನ್ನೋ ಮಾತಿದೆ.ಕೆಲವರಂತು ಭಾರಿ ಕಿತ್ತಾಡಿಕೊಂಡು ಸಪರೇಟ್ ಆಗಿ ಇರುವವರೇ ಇದ್ದಾರೆ. ಆದರೆ ಈ ಅತ್ತೆ ಮಾತ್ರ ಡಿಫರೆಂಟ್ ಯಾಕೆ ನೋಡಿ..
ಬಹುತೇಕ ಕುಟುಂಬಗಳಲ್ಲಿ ಅತ್ತೆ- ಸೊಸೆ ಮಧ್ಯೆ ಜಗಳ ಅಥವಾ ಅಸಮಾಧಾನ ಇದ್ದೇ ಇರುತ್ತದೆ. ಆದರೆ ಎಲ್ಲೋ ಕೆಲವು ಕುಟುಂಬಗಳಲ್ಲಿ ಮಾತ್ರ ಅತ್ತೆ- ಸೊಸೆ ಸ್ವಂತ ತಾಯಿ-ಮಗಳಂತೆ ಇರುತ್ತಾರೆ.ಈ ಪೈಕಿ ಇಲ್ಲೊಬ್ಬರು ಅತ್ತೆ ಸೇರಿಕೊಳ್ಳುತ್ತಾರೆ.ಮಾತೃ ಹೃದಯಿ ಅತ್ತೆಯೊಬ್ಬರು ತಮ್ಮ ಅಂಗ ದಾನ ಮಾಡಿ ಸೊಸೆಗೆ ಜೀವದಾನ ಮಾಡಿರುವ ವಿಶೇಷ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈನ ಕಂಡಿವ್ಲಿಯಲ್ಲಿ ಈ ವಿಶೇಷ ಘಟನೆ ವರದಿಯಾಗಿದ್ದು, 43 ವರ್ಷದ ಸೊಸೆ ಆಮಿಷಾ ಜಿತೇಶ್ ಮೊಟಾ ಅವರು ಕಳೆದ ವರ್ಷ ಕಿಡ್ನಿ ಸಮಸ್ಯೆಗೆ ಗುರಿಯಾಗಿದ್ದರು. ಅನಾರೋಗ್ಯದಿಂದಾಗಿ ಅವರ ಎರಡೂ ಕಿಡ್ನಿ ವೈಫಲ್ಯವಾಗಿತ್ತು. ವೈದ್ಯರು ಆಮಿಷಾ ಅವರಿಗೆ ಕಿಡ್ನಿ ಬದಲಾವಣೆ ಮಾಡಬೇಕೆಂದು ತಿಳಿಸಿದ್ದು, ಅದಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ಅದಕ್ಕಾಗಿ ಆಮಿಷಾ ಪತಿ ಜಿತೇಶ್ ಸೇರಿ ಕುಟುಂಬದ ಎಲ್ಲರ ಕಿಡ್ನಿ ಪರಿಶೀಲನೆ ಮಾಡಲಾಗಿದೆ. ಆದರೆ ಕುಟುಂಬದ ಬಹುತೇಕರು ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ಸೊಸೆ ಆಮಿಷಾ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಾ ಹೋಗಿತ್ತು. ಇದನ್ನು ಕಂಡ ಆಕೆಯ ಅತ್ತೆ (ಜಿತೇಶ್ ತಾಯಿ) ಪ್ರಭಾ ಕಂಠಿಲಾಲ್ ಮೊಟಾ ಅವರು ತಾವೇ ತಮ್ಮ ಸೊಸೆಗೆ ಕಿಡ್ನಿ ದಾನ ಮಾಡುವುದಾಗಿ ಮುಂದೆ ಬಂದಿದ್ದಾರೆ.ಆದರೂ ಕೆಲವರು ನಿಮಗ್ಯಾಕೆ ಬೇಕು ಈ ಏಜ್ ನಲ್ಲಿ ಎಂದವರು ಇದ್ದಾರೆ. ಅವರ ಮಾತಿಗೆ ಮಣಿಯದೇ ಮುಂದೆ ಬಂದು ನೆರವಾಗಿದ್ದಾರೆ.ವಯಸ್ಸು 70ರ ಗಡಿದಾಟಿದ್ದು, ಅವರ ಕಿಡ್ನಿ ತೆಗೆದುಕೊಳ್ಳುವುದು ಕಷ್ಟವಾಗಬಹುದು ಎಂದು ವೈದ್ಯರು ಯೋಚಿಸಿದ್ದರು. ವೈದ್ಯಕೀಯ ಪರಿಶೀಲನೆ ಮಾಡಿ ನೋಡಿದಾಗ ಪ್ರಭಾ ಅವರು ಆರೋಗ್ಯವಾಗಿದ್ದು, ಅವರ ಕಿಡ್ನಿಯನ್ನು ದಾನ ಮಾಡಬಹುದು ಎಂದಿದ್ದರು ವೈದ್ಯರು.
ಸೊಸೆ ನನ್ನ ಮಗಳಂತೆ !
ಯಾರಾದರೂ ಏನಾದರೂ ಅಂದ್ರೂ ಕೂಡ ಅದನ್ನು ಕೇಳದ ಪ್ರಭಾ ಅವರು “ಆಮಿಷಾ ನನ್ನ ಮಗಳಿದ್ದಂತೆ. ಮಗಳಿಗಾಗಿ ತಾಯಿ ಏನನ್ನಾದರೂ ಮಾಡಬಲ್ಲಳು” ಎಂದು ಹೇಳಿ ಕಿಡ್ನಿ ದಾನ ಮಾಡಲು ಮುಂದಾಗಿದ್ದಾರೆ.
ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಪ್ರಭಾ ಅವರ ಕಿಡ್ನಿಯನ್ನು ತೆಗೆದು ಸೊಸೆ ಆಮಿಷಾ ಅವರ ದೇಹಕ್ಕೆ ಜೋಡಿಸಲಾಗಿದೆ. ಸದ್ಯ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ನನ್ನಿಂದಾಗಿ ಸೊಸೆಯ ಜೀವ ಉಳಿಯಿತಲ್ಲಾ ಅನ್ನುವ ಸಾರ್ಥಕ ಭಾವನೆ ಅತ್ತೆಯಲ್ಲಿದೆ. ಇಬ್ಬರನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಸೊಸೆಯನ್ನು ಮಗಳಂತೆ ಕಾಪಾಡಿದ ಪ್ರಭಾ ಅವರ ಈ ಕೆಲಸ ಕುಟುಂಬಸ್ಥರು ಹಾಗೂ ಅವರ ನೆರೆಹೊರೆಯವರು ಮನಸ್ಸು ಕದ್ದಿದೆ. ಪ್ರಭಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನದಂದು ಮನೆಯನ್ನು ಬಲೂನ್ ಮತ್ತು ಹೂವುಗಳಿಂದ ಅಲಂಕರಿಸಿ, ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ ಎಂಬ ಮಾಹಿತಿಯಿದೆ.
ಅತ್ತೆ ಸೊಸೆ ಕಿತ್ತಾಡಿಕೊಂಡು ಬೇರೆ ಬೇರೆ ಮನೆಗಳನ್ನು ಮಾಡಿಕೊಳ್ಳುವ ಈ ಕಾಲದಲ್ಲಿ ಸೊಸೆಗೆಂದು ತನ್ನ ಆರೋಗ್ಯವನ್ನೇ ಪಣಕ್ಕಿಟ್ಟ ಅತ್ತೆಯ ಕಥೆ ಎಲ್ಲೆಡೆ ಹರಿದಾಡಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅನೇಕರಿಗೆ ಅತ್ತೆ ಸೊಸೆಯ ಪ್ರೀತಿಯ ಪಾಠ ಹೇಳಿದಂತಾಗಿದೆ.