ನ್ಯೂಸ್ ನಾಟೌಟ್: ಉಡುಪಿ ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ(CID) ಅಧಿಕಾರಿಗಳ ತಂಡ ಮೊದಲನೇ ಹಂತದ ತನಿಖೆ ಮುಗಿಸಿ ಬೆಂಗಳೂರಿಗೆ ತೆರಳಿದೆ ಎನ್ನಲಾಗಿದೆ. ಸದ್ಯ ಸಿಐಡಿ ಪೊಲೀಸರು ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಎಫ್ಎಸ್ಎಲ್ ಅಧಿಕಾರಿಗಳು ವಿಡಿಯೋ ಫೋಟೋ ರಿಟ್ರೈವ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಿಡಿಯೋ ಫೋಟೋ ಹಿಂಪಡೆಯಲಾಗದಿದ್ದರೆ ಗುಜರಾತ್ಗೆ ಫೋನ್ಗಳನ್ನು ರವಾನಿಸಲು ಚಿಂತನೆ ನಡೆದಿದೆ. ಗುಜರಾತ್ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿಡಿಯೋ ರಿಟ್ರೈವ್ ಮಾಡಿಸಲಾಗುತ್ತೆ. ಒಂದೆರಡು ದಿನದಲ್ಲಿ ಗುಜರಾತ್ಗೆ ಫೋನ್ಗಳನ್ನು ರವಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿಐಡಿ ಎಡಿಜಿಪಿ ಮನೀಶ್ ಕರ್ಬಿಕರ್ ಮತ್ತು ಎಸ್ ಪಿ ರಾಘವೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ತನಿಖಾಧಿಕಾರಿ ಡಿವೈಎಸ್ಪಿ ಅಂಜುಮಾಲ ಅವರು ಒಂದು ವಾರದಿಂದ ಉಡುಪಿಯಲ್ಲಿ ಇದ್ದುಕೊಂಡು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಬೆಂಗಳೂರಿಗೆ ತೆರಳಿದ್ದಾರೆ. ಸದ್ಯ ಸಿಐಡಿ ಪೊಲೀಸರು ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದಾರೆ.
ಗುಜರಾತ್ನ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಮೂಲಕ ಫೋನ್ ರಿಟ್ರೈವ್ ಮಾಡುವ ಸಾಧ್ಯತೆ ಇದೆ. ಜುಲೈ 18ರಂದು ಉಡುಪಿಯ ಕಾಲೇಜೊಂದರಲ್ಲಿ ನಡೆದ ಶೌಚಗೃಹದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಕಳೆದ ಒಂದು ವಾರದಿಂದ ಉಡುಪಿಯಲ್ಲಿ ಬೀಡು ಬಿಟ್ಟಿದ್ದ ಸಿಐಡಿ ತಂಡ ಪ್ಯಾರಾ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದೆ.
ಇನ್ನು ಸಿಐಡಿ ತಂಡ ಒಂದು ಹಂತದ ತನಿಖೆ ಮುಗಿಸಿದ್ದು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದ್ದ ಮೊಬೈಲ್ ನ ಎಫ್ಎಸ್ಎಲ್ ವರದಿಗಾಗಿ ಸಿಐಡಿ ತನಿಖಾ ತಂಡ ಕಾಯುತ್ತಿದೆ. ವಿದ್ಯಾರ್ಥಿನಿಯರಿಂದ ಪಡೆಯಲಾಗಿದ್ದ ಮೂರು ಮೊಬೈಲ್ಗಳ ಎಫ್ಎಸ್ಎಲ್ ವರದಿ ಬಂದ ತಕ್ಷಣ ಪ್ರಕರಣದ ಸತ್ಯಾಸತ್ಯತೆ ಬಯಲಾಗಲಿದೆ.