ನ್ಯೂಸ್ ನಾಟೌಟ್ : ಎಲ್ಲಿಯವರೆಗೆ ಜನ ಮೋಸ ಹೋಗ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ.ಕಾರಣಗಳನ್ನು ಒಡ್ಡಿ ವಂಚಿಸಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ.ಮಹಿಳೆಯರು ಹಾಗೂ ಪುರುಷರನ್ನೂ ಯಾಮಾರಿಸಿ ಚಿನ್ನ ದೋಚುವ ಕಳ್ಳರು ಇತ್ತೀಚೆಗೆ ಜಾಸ್ತಿಯಾಗ್ಬಿಟ್ಟಿದ್ದಾರೆ.ಅಂತಹ ಪ್ರಕರಣವೊಂದು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ವರದಿಯಾಗಿದೆ.
ವೃದ್ದರೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಾತಿಗಿಳಿದ ಯುವಕ ಅವರನ್ನು ದಿಕ್ಕು ತಪ್ಪಿಸುವಂತೆ ಮಾಡಿದ್ದಾನೆ. ಅವರ ಕತ್ತಿನಲ್ಲಿದ್ದ 14 ಗ್ರಾಮ್ ತೂಕದ ಚಿನ್ನದ ಸರವನ್ನು ಕಂಡ ಅಪರಿಚಿತ ವ್ಯಕ್ತಿ ಹೇಗಾದರೂ ಲಪಟಾಯಿಸಬೇಕು ಎನ್ನುತ್ತಾ ನಿರ್ಧಾರ ಮಾಡುತ್ತಾನೆ.
ಉಪ್ಪಿನಂಗಡಿಯ ಕೋಟೆ ನಿವಾಸಿ ಗಂಗಾಧರ್ ಟೈಲರ್ (70) ಎಂಬವರು ಮುಂಜಾನೆ 7.30ರ ಸುಮಾರಿಗೆ ಹೊಟೇಲೊಂದಕ್ಕೆ ಹೋಗುತ್ತಿದ್ದರು.ಈ ವೇಳೆ ದಾರಿ ಮಧ್ಯೆ ಭೇಟಿಯಾದ ಯುವಕನೋರ್ವ ಅವರ ಜತೆ ಮಾತನಾಡುತ್ತಾನೆ. ಅವರಿಗೆ ಅರಿವಿಲ್ಲದೆಯೇ ಅವರಾಗಿಯೇ ಅವರ ಕತ್ತಿನಲ್ಲಿದ್ದ ಚಿನ್ನಾಭರಣವನ್ನು ಆತನ ಕೈಗೆ ನೀಡುವಂತೆ ಮಾಡುತ್ತಾನೆ. ಬಳಿಕ ಬ್ಯಾಂಕಿಗೆ ಹೋಗಿ ಠಸೆ ಪೇಪರ್ ತನ್ನಿ ಎಂಬ ಆತನ ಸೂಚನೆಯನ್ನು ನೀಡುತ್ತಾನೆ.
ಈ ವೇಳೆ ಬ್ಯಾಂಕಿನತ್ತ ಸಾಗಿದ ಅವರಿಗೆ ತುಸು ದೂರ ಹೋದಾಗ, ಮತ್ತೆ ನೆನಪು ಬರುತ್ತದೆ. ತಾನ್ಯಾಕೆ ಆತನಿಗೆ ಚಿನ್ನಾಭರಣವನ್ನು ನೀಡಿದೆ ? ತಾನ್ಯಾಕೆ ಈ ಹೊತ್ತಲ್ಲಿ ಬ್ಯಾಂಕಿನತ್ತ ಹೋಗುತ್ತಿದ್ದೇನೆ ಎಂಬ ಅರಿವು ಬಂದು ಚಿನ್ನಾಭರಣ ಹಸ್ತಾಂತರಿಸಿದ ಸ್ಥಳಕ್ಕೆ ಬಂದಾಗ ಯುವಕ ನಾಪತ್ತೆಯಾಗಿದ್ದ. ತಾವು ವಂಚನೆಗೆ ಒಳಗಾದ ಬಗ್ಗೆ ಅರಿವಾಗುತ್ತಲೇ ಆತನಿಗಾಗಿ ಹುಡುಕಾಟ ನಡೆಸಿದರಾದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತ ಉಪ್ಪಿನಂಗಡಿಯಲ್ಲಿ ಮತ್ತೊಂದು ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಹೊಸ ಬಸ್ ನಿಲ್ದಾಣದ ಸಮೀಪ ಇರುವ ಕೋಳಿ ಮಾಂಸ ಮಾರಾಟ ಮಳಿಗೆಗಳಿಗೆ ಕಳ್ಳನೋರ್ವ ನುಗ್ಗಿ ನಗದು ಹಣವನ್ನು ಕದ್ದೊಯ್ದ ಘಟನೆ ನಡೆದಿದೆ. ಅಂಗಡಿಗೆ ನುಗ್ಗಿದ ಕಳ್ಳನೋರ್ವ ಒಂದು ಅಂಗಡಿಯಿಂದ 10 ಸಾವಿರ ರೂ. ಎಗರಿಸಿರುವುದು ಸಿಸಿ ಕೆಮರಾ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಉಪ್ಪಿನಂಗಡಿ ಪೊಲೀಸರು ಈ ಕುರಿತಾಗಿಯೂ ತನಿಖೆ ನಡೆಸುತ್ತಿದ್ದಾರೆ.