ನ್ಯೂಸ್ ನಾಟೌಟ್: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರ ಫೋಟೋ ಬಳಸಿ ಟಿಪ್ಪು ಸುಲ್ತಾನ್ಗೆ ನಮಸ್ಕರಿಸುವ ವಿಡಿಯೋ ಹರಿಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಹಿಂದೆ ಈತನೆ ಹುಬ್ಬಳ್ಳಿಯ ವಿದ್ಯಾನಗರದ ಖಾಸಗಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಬಳಸಿಕೊಂಡು ಅಶ್ಲೀಲ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸೈಬರ್ ವಂಚಕ ಎನ್ನಲಾಗಿದೆ. ಈತನ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜು ಪ್ರಕರಣದಲ್ಲಿ ಪೊಲೀಸರು ಎಫ್ಆರ್ ದಾಖಲಿಸಿ, ತನಿಖೆ ನಡೆಸಲು 8 ಅಧಿಕಾರಿಗಳ ತಂಡ ರಚಿಸಿದ್ದಾರೆ, ಇದರ ಬೆನ್ನಲ್ಲೆ ಮತ್ತೊಂದು ಅಪರಾಧ ಮಾಡಿದ್ದು ಬೆಳಕಿಗೆ ಬಂದಿದೆ. ವಿಡಿಯೋ ತುಣಕುಗಳ ಪರಿಶೀಲನೆಗೆ ಸೈಬರ್ ಪ್ರಯೋಗಾಲಯಕ್ಕೂ ಕಳಿಸಿದ್ದಾರೆ. ಇದೆಲ್ಲದರ ಮಧ್ಯೆಯೂ ತಾಕತ್ತಿದ್ದರೇ ಹಿಡಿಯಿರಿ ಎಂದು ಅರೋಪಿ ಪೊಲೀಸರಿಗೆ ಸವಾಲು ಹಾಕಿದ್ದಾನೆ ಎನ್ನಲಾಗಿದೆ.
ಪ್ರಧಾನಿ ಮೋದಿ ಟಿಪ್ಪು ಸುಲ್ತಾನ ಭಾವಚಿತ್ರಕ್ಕೆ ಶಿರಭಾಗಿ ನಮಿಸುತ್ತಿರುವುದು, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಹಾಗೂ ಪ್ರಮೋದ ಮುತಾಲಿಕ್ ಟಿಪ್ಪುವಿನ ಭಾವಚಿತ್ರ ಹಿಡಿದಿರುವುದು ಒಳಗೊಂಡಂತೆ ಸುಮಾರು 22 ಸೆಕೆಂಡ್ ಗಳ ವಿಡಿಯೋ ಮಾಡಿದ್ದಾನೆ.
ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ಟಿಪ್ಪುವಿಗೆ ನಮಿಸುತ್ತಿರುವ ಎಡಿಟ್ ಮಾಡಿರುವ ಫೋಟೋಗಳ ವೀಡಿಯೋ ಕೊಲಾಜ್ ಮಾಡಿದ್ದಾನೆ. ಅದಕ್ಕೆ ಉರ್ದು ಭಾಷೆಯ ಹಾಡನ್ನು ಅಳವಡಿಸಲಾಗಿದೆ. ವಂಚಕನ ಉದ್ದೇಶವಾದರೂ ಏನು ಎಂಬುದು ಪೊಲೀಸರಿಗೆ ಸವಾಲಾಗಿದೆ. ತನಿಖೆಯಿಂದ ತಿಳಿದು ಬರಬೇಕಿದೆ.