ನ್ಯೂಸ್ ನಾಟೌಟ್ : ಗುತ್ತಿಗಾರಿನಲ್ಲಿ ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿ ಪ್ರಾಣವನ್ನು ಕಾಪಾಡಿದ ಘಟನೆ ನಡೆದಿದೆ.
ಗುತ್ತಿಗಾರು ಸಮೀಪದ ಹಾಲೆಮಜಲು ಎಂಬಲ್ಲಿ ಬೆಳಿಗ್ಗೆ 7.30ರ ಸುಮಾರಿಗೆ ವೃದ್ದರೊಬ್ಬರು ಆಕಸ್ಮಿಕವಾಗಿ ಬಿದ್ದಿದ್ದರು.ಬಿದ್ದ ರಭಸಕ್ಕೆ ಮೈ ಮೇಲೆಲ್ಲಾ ಗಾಯವಾಗಿದ್ದು,ರಕ್ತ ಸೋರುತ್ತಿತ್ತು.ಈ ವೇಳೆ ಗಮನಿಸಿದ ವಿನ್ಯಾಸ್ ಕೊಚ್ಚಿ ಎಂಬುವವರು ಗುತ್ತಿಗಾರು ಆಂಬುಲೆನ್ಸ್ ಸೇವೆಗೆ ಮನವಿ ಮಾಡಿದ್ದಾರೆ.ಕೂಡಲೇ ಅವರನ್ನು ಸ್ಥಳೀಯ ವೈದ್ಯರಾದ ಡಾ. ಕಾಮತ್ ಅವರ ಬಳಿ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.
ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು.ವೃದ್ದನಿಗೆ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದು,ವೈದ್ಯರುಗಳು ಅವರಿಗೆ ಧೈರ್ಯ ತುಂಬಿದರು.ಇದಾದ ಬಳಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಔಷಧಿ ಸ್ವೀಕರಿಸಿ, ಸ್ವತಃ ಆಂಬುಲೆನ್ಸ್ ಮೂಲಕವೇ ಅವರ ಸಂಬಂಧಿಗಳ ಮನೆಗೆ ಕರೆತರಲಾಯಿತು.
ದುಗಲಡ್ಕದ ಕೂಟೆಲೂ ಎಂಬಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದು, ಆಗ ತಾನೇ ಚೇತರಿಸಿಕೊಂಡಿದ್ದ ಗಾಯಾಳು ವ್ಯಕ್ತಿ ಆಂಬುಲೆನ್ಸ್ ಸೇವೆಗೆ ಸಹಾಯಧನ ನೀಡಿ ಮಾದರಿಯಾಗಿದ್ದಾರೆ..!ಈ ವೇಳೆ ಗಾಯಾಳು ವ್ಯಕ್ತಿ ಮಾತನಾಡುತ್ತಾ ‘ನಿಮ್ಮ ಸೇವೆಯನ್ನು ನಾನೆಂದು ಮರೆಯೋದಿಲ್ಲ, ನಿಮ್ಮ ಈ ಸಾಮಾಜಿಕ ಕಳಕಳಿ ಹೀಗೆ ಮುಂದುವರಿಯಲಿ’ ಎಂದರು.
ಈ ವೇಳೆ ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಮಾಧವ್ ಯೆರ್ದಡ್ಕ, ರಾಜೇಶ್ ಉತ್ರಂಬೆ, ರಾಜೇಶ್ ಕುಕ್ಕುಜೆ,ಗಿರೀಶ್ ಕಾಯರಮೊಗೇರ್, ತೇಜಾವತಿ ಮೇಡಂ ಸಹಕಾರ ನೀಡಿದ್ದಾರೆ. ಸಮಾಜ ಸೇವಕ ಚಂದ್ರಶೇಖರ ಕಡೋಡಿ ಮತ್ತು ವಿನಯ್ ಮಾಡಬಾಕಿಲು ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ಹಾಗೂ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು.