ನ್ಯೂಸ್ ನಾಟೌಟ್: ಅಣ್ಣ ತಂಗಿಯರ ಪವಿತ್ರ ಅನುಬಂಧಕ್ಕೆ ಬೆಲೆಕಟ್ಟಲಾಗದು. ಅನೇಕ ಹಾಡುಗಳಲ್ಲಿ ಕವಿಗಳು ಅಣ್ಣ-ತಂಗಿಯರ ಬಾಂಧವ್ಯವನ್ನು ಭಾವನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ ಇಲ್ಲೊಬ್ಬ ಅಣ್ಣನು ಕೂಡ ತನ್ನ ತಂಗಿಯನ್ನು ವಿಪರೀತ ಪ್ರೀತಿಸುತ್ತಿದ್ದ ಕಥೆ ಇದು. ಆಕೆಯ ಮದುವೆ ಮಾಡಿ ಹೆಣ್ಣು ಇಳಿಸಿ ಕೊಡುವ ಸಂದರ್ಭದಲ್ಲಿ ಖ್ಯಾತ ಕ್ರಿಕೆಟಿಗ ಕಣ್ಣೀರಿಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು, ಐಪಿಎಲ್ ನ ಪ್ರಮುಖ ತಂಡಗಳಲ್ಲೊಂದಾದ ಆರ್ಸಿಬಿ (RCB) ತಂಡದ ಖ್ಯಾತ ಆಲ್ ರೌಂಡರ್ ಹಾಗೂ ಶ್ರೀ ಲಂಕಾ ತಂಡದ ಕ್ರಿಕೆಟಿಗ ವನಿಂದು ಹಸರಂಗ(Wanindu Hasaranga) ತನ್ನ ತಂಗಿಯನ್ನು ಮದುವೆ ಮಾಡಿ ಕೊಡುವ ಸಂದರ್ಭದಲ್ಲಿ ಗಳಗಳನೆ ಅತ್ತಿದ್ದಾರೆ. ಅಣ್ಣನ ಬಿಗಿದಪ್ಪಿಕೊಂಡು ತಂಗಿ ಕೂಡ ಜೋರಾಗಿ ಅತ್ತಿದ್ದಾರೆ. ಭಾವನಾತ್ಮಕ ಕ್ಷಣದ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಭಾರೀ ವೀಕ್ಷಣೆಗೂ ಕಾರಣವಾಗಿದೆ.
ವನಿಂದು ಹಸರಂಗ ಅವರು ತಮ್ಮ ತಂಗಿಯ ಮದುವೆಯಲ್ಲಿ ಬೇಸರದಿಂದ ಕಣ್ಣೀರು ಹಾಕಿರುವ ವಿಡಿಯೊ ಇನ್ಸ್ಟಾಗ್ರಾಮ್ನಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊ ಕಂಡ ಅನೇಕರು ಅಣ್ಣ ತಂಗಿಯ ಈ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಸರಂಗ ತಮ್ಮ ಕಿರಿಯ ತಂಗಿಯನ್ನು ಮದುವೆ(wanindu hasaranga sister wedding) ಮಾಡಿ ಗಂಡನ ಮನೆಗೆ ಬೀಳ್ಕೊಡುವಾಗ ತಂಗಿಯನ್ನು ಅಪ್ಪಿಕೊಂಡು ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಂಗಿಯೂ ಕೂಡ ಅಣ್ಣನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ್ದಾರೆ.
ಐಪಿಎಲ್ನಲ್ಲಿ(IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಪರ ಆಡುವ ಶ್ರೀಲಂಕಾದ ಸ್ಪಿನ್ ಬೌಲರ್ ವನಿಂದು ಹಸರಂಗ ಅವರು ಕೆಲ ದಿನಗಳ ಹಿಂದಷ್ಟೇ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಸೀಮಿತ ಓವರ್ಗಳ ಕ್ರಿಕೆಟ್ಗೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು.
ಆಲ್ರೌಂಡರ್ ಆಗಿರುವ ಹಸರಂಗ 2020ರಲ್ಲಿ ಸೆಂಚುರಿಯನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಒಟ್ಟಾರೆಯಾಗಿ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಹೇಳಿಕೊಳ್ಳವಂತ ಸಾಧನೆಯನ್ನು ಮಾಡಿಲ್ಲ. ಕೇವಲ 4 ವಿಕೆಟ್ ಮಾತ್ರ ಕಬಳಿಸಿದ್ದಾರೆ.
ಬ್ಯಾಟಿಂಗ್ನಲ್ಲಿ 196 ರನ್ ಕಲೆಹಾಕಿದ್ದಾರೆ. 2021ರಲ್ಲಿ ಬಾಂಗ್ಲಾ ವಿರುದ್ಧ ತವರಿನಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಇದಾದ ಬಳಿಕ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. 48 ಏಕದಿನ ಪಂದ್ಯಗಳು ಮತ್ತು 58 T20 ಪಂದ್ಯಗಳಲ್ಲಿ ಆಡಿರುವ ಅವರು ಒಟ್ಟು 158 ವಿಕೆಟ್ಗನ್ನು ಪಡೆದಿದ್ದಾರೆ. ಜತೆಗೆ 1,365 ರನ್ ಗಳಿಸಿದ್ದಾರೆ.
ಭಾರತದಲ್ಲಿ ಇದೇ ಅಕ್ಟೋಬರ್ 5ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇದಕ್ಕಾಗಿ ಶ್ರೀಲಂಕಾ ತಂಡ ಅರ್ಹತೆ ಪಡೆಯುವಲ್ಲಿ ಹಸರಂಗ ಪ್ರಮುಖ ಪಾತ್ರವಹಿಸಿದ್ದರು. ಜಿಂಬಾಬ್ವೆಯಲ್ಲಿ ನಡೆದ ಕ್ವಾಲಿಫೈಯರ್ ಟೂರ್ನಿಯಲ್ಲಿ ಹಸರಂಗ ಒಟ್ಟು 22 ವಿಕೆಟ್ ಉರುಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು.