ನ್ಯೂಸ್ ನಾಟೌಟ್ : ಪ್ಲಾಸ್ಟಿಕ್ ಚೀಲ ಬಳಸಬಾರದು ಅನ್ನುವ ಸರ್ಕಾರದ ನಿಯಮವಿದ್ದರೂ ಅಕ್ರಮವಾಗಿ ಪ್ಲಾಸ್ಟಿಕ್ ಹೇರಿಕೊಂಡು ಸುಳ್ಯಕ್ಕೆ ಬಂದ ಓಮ್ನಿ ಕಾರನ್ನು ನಗರ ಪಂಚಾಯತ್ ಅಧಿಕಾರಿಗಳು ಶನಿವಾರ (ಆಗಸ್ಟ್ 19) ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರಿನ ಬೈಕಂಪಾಡಿಯಿಂದ ಸುಳ್ಯಕ್ಕೆ ಸುಮಾರು ಐದು ಕ್ವಿಂಟಾಲ್ ಗೂ ಹೆಚ್ಚು ನಿಷೇಧಿತ ಪ್ಲಾಸ್ಟಿಕ್ ಹೇರಿಕೊಂಡು ಓಮ್ನಿ ಕಾರು ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ನಗರ ಪಂಚಾಯತ್ ನ ಅಧಿಕಾರಿಗಳು ತಕ್ಷಣ ಅದನ್ನು ಹಿಡಿದಿದ್ದಾರೆ. ಈ ಹಿಂದೆಯೇ ನಗರದಲ್ಲಿ ಪ್ಲಾಸ್ಟಿಕ್ ಸಮಸ್ಯೆ ದೊಡ್ಡದಾಗಿ ಭಾರಿ ತಲೆ ನೋವಿಗೆ ಕಾರಣವಾಗಿತ್ತು. ಈ ಕಾರಣಕ್ಕೆ ವರ್ತಕರು ಯಾರೂ ಕೂಡ ಪ್ಲಾಸ್ಟಿಕ್ ಬಳಸಬಾರದು ಎಂದು ಸೂಚಿಸಲಾಗಿತ್ತು.
ಆದರೆ ಕೆಲವರು ಕದ್ದು ಮುಚ್ಚಿ ಪ್ಲಾಸ್ಟಿಕ್ ಚೀಲವನ್ನು ತಂದು ಗ್ರಾಹಕರಿಗೆ ಕೊಡುತ್ತಿದ್ದರು. ಇದೀಗ ಓಮ್ನಿಯಲ್ಲಿ ಇದ್ದ ಇಬ್ಬರನ್ನು ಕೂಡ ನಗರ ಪಂಚಾಯತ್ ಬಳಿ ಕರೆದುಕೊಂಡು ಬರಲಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುಳ್ಯ ಪೊಲೀಸರಿಗೆ ಮಾಹಿತಿ ನೀಡುವ ಪ್ರಯತ್ನ ನಡೆಸಲಾಗಿದೆ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಆರ್ಐ ಇನ್ಚಾರ್ಜ್ ಶಶಿಕಲಾ ಕಾರ್ಯಾಚರಣೆಯಲ್ಲಿದ್ದರು.