ನ್ಯೂಸ್ ನಾಟೌಟ್: ಆಗಸ್ಟ್ 8ಕ್ಕೆ ಹಿಂದೂ ಹುಲಿ ಮಹೇಶ್ ಶೆಟ್ಟಿ ತಿಮರೋಡಿ ಸುಳ್ಯಕ್ಕೆ ಆಗಮಿಸುತ್ತಿದ್ದಾರೆ. ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೃಹತ್ ಸಾರ್ವಜನಿಕ ಸಭೆ ಹಾಗೂ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾವಿರಾರು ಜನ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕಾಲ್ನಡಿಗೆ ಜಾಥಾದಲ್ಲಿ ನಿಂತಿಕಲ್ಲಿನಿಂದ ಬೆಳ್ಳಾರೆಯಾಗಿ ಸೋಣಂಗೇರಿ ಮೂಲಕ ಪೈಚಾರ್ ಆಗಿ ಸುಳ್ಯಕ್ಕೆ ತಲುಪಿ ಸುಳ್ಯದಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ.
ಸಭೆಯಲ್ಲಿ ಸೌಜನ್ಯ ಕುಟುಂಬ ವರ್ಗದವರು ಕೂಡ ಇರಲಿದ್ದಾರೆ. ಸಾಮಾಜಿಕ ಕಾರ್ಯಕರ್ತರು ಕೂಡ ಇರಲಿದ್ದಾರೆ. ಸೌಜನ್ಯಳಿಗೆ ನ್ಯಾಯ ಒದಗಿಸುವುದಕ್ಕೆ ಆರೋಪಿಗಳ ಬಂಧನವಾಗಲೇ ಬೇಕು ಅನ್ನುವ ಒತ್ತಾಯವನ್ನು ಜಾಥಾದ ಮೂಲಕ ಮಾಡಲಾಗುತ್ತದೆ.
ಸೌಜನ್ಯ ಅತ್ಯಾಚಾರ-ಭೀಕರ ಹತ್ಯೆ ಪ್ರಕರಣ ಹನ್ನೊಂದು ವರ್ಷಗಳ ಹಿಂದೆ ನಡೆದಿತ್ತು. ಈ ವಿಚಾರವಾಗಿ ಸಂತೋಷ್ ರಾವ್ ಅನ್ನುವ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಸಂತೋಷ್ ರಾವ್ ನಿರಪರಾಧಿ ಅನ್ನುವುದನ್ನು ಹನ್ನೊಂದು ವರ್ಷದ ಬಳಿಕ ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿತ್ತು. ಈ ಬೆನ್ನಲ್ಲೇ ಸೌಜನ್ಯ ಕುಟುಂಬಸ್ಥರು, ಸಾಮಾಜಿಕ ಹೋರಾಟಗಾರರು ನಿಜವಾದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇದೀಗ ದೇಶವ್ಯಾಪಿ ಸೌಜನ್ಯ ಪರ ಧ್ವನಿ ಕೇಳಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿದಂತೆ ಮೈಸೂರು, ಬೆಂಗಳೂರು ಸೇರಿದಂತೆ ಹಲವಾರು ಕಡೆಗಳಲ್ಲಿ ಸೌಜನ್ಯಳಿಗೆ ನ್ಯಾಯ ದೊರಕಬೇಕು ಅನ್ನುವ ಕೂಗು ಕೇಳಿ ಬರುತ್ತಿದೆ.