ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣ ಮರುತನಿಖೆ ಒತ್ತಾಯಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಭಾನುವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, 17 ವರ್ಷ ದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಪಾಪಿಗಳನ್ನು ಹಿಡಿಯಲು ಸರ್ಕಾರ ತನಿಖಾ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ.
ನಿರಪರಾಧಿ ಸಂತೋಷ್ ರಾವ್ ನನ್ನು ಪ್ರಕರಣದಲ್ಲಿ ಸುಖಾಸುಮ್ಮನೆ ಸಿಲುಕಿಸಿ ವರ್ಷಗಟ್ಟಲೆ ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸುವಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ತ್ರೇತಾಯುಗದಲ್ಲಿ ಸೀತಾಮಾತೆ, ಕಲಿಯುಗದಲ್ಲಿ ದ್ರೌಪದಿ, ಕಲಿಯುಗದಲ್ಲಿ ಸೌಜನ್ಯ ದೇವರೂಪದಲ್ಲಿ ಬಂದು ಕ್ರಾಂತಿಯೊಂದಕ್ಕೆ ಮುನ್ನುಡಿಯಾಗಿದ್ದಾಳೆ.
ಅಂದು ಪ್ರಕರಣ ನಡೆದ ದಿನ ತನಿಖೆ ಅಧಿಕಾರಿಯಾಗಿದ್ದ ವರಿಗೂ ಸೌಜನ್ಯಷ್ಟೇ ವಯಸ್ಸಿನ ಮಗಳಿದ್ದಲ್ಲಿ ಆತನಿಗೆ ಹೆಣ್ಣು ಹೆತ್ತವರ ನೋವು ಏನೆಂದು ಅರ್ಥವಾಗುತ್ತಿತ್ತು. ನಾನು ಒಕ್ಕಲಿಗ ಸಮುದಾಯ ಹುಡುಗಿ ಎಂದು ಹೋರಾಟಕ್ಕೆ ಇಳಿದಿಲ್ಲ. ಯಾರ ಮನೆ ಮಗಳಾಗಲಿ ನಮಗೆ ಅದು ಮುಖ್ಯವಲ್ಲ. ಆ ನೊಂದ ಕುಟುಂಬ ನ್ಯಾಯ ಕೊಡಬೇಕಿರುವುದು ನಮಗೆ ಮುಖ್ಯ ಎಂದರು. ನಮಗೆ ನ್ಯಾಯ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಪ್ರಜಾಪ್ರಭುತ್ವ ದೇಶದಲ್ಲಿ ಅದನ್ನು ಹೇಗೆ ತೆಗೆದುಕೊಳ್ಳುವುದು ಎಂದು ನಮಗೆ ಗೊತ್ತಿದೆ. ಅಮಾಯಕ ಹೆಣ್ಮಗುವಿಗೆ ಉಂಟಾಗಿರುವ ಘನಘೋರ ಕೃತ್ಯಕ್ಕೆ ಪ್ರಾಯಶ್ಚಿತ ನೀಡುವಂತೆ ಸರ್ಕಾರವನ್ನು ಕೇಳುವುದು ತಪ್ಪೇ ಎಂದು ತಿಮರೋಡಿ ಪ್ರಶ್ನಿಸಿದರು.
ರಾಜ್ಯದ ಗೃಹ ಮಂತ್ರಿ ಸೌಜನ್ಯ ಪ್ರಕರಣ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ. ಆದರೆ ಈ ರೀತಿ ಹೇಳಿಕೆ ನೀಡಿದ ಅವರು ಎಂದು ಮುಗಿಯುತ್ತಾರೆ ಎಂದು ಗೊತ್ತಿಲ್ಲ. ಒಂದು ದಿನ ನಿಮ್ಮ ಬಾಗಿಲಿಗೆ ಬಂದು ಮುತ್ತಿಗೆ ಹಾಕಿದಾಗ ನಿಮಗೆ ಹೋರಾಟದ ಕಿಚ್ಚು, ತೀವ್ರತೆಯ ಅರಿವಾಗುತ್ತದೆ. ಒಂದು ವೇಳೆ ರಾಜಕಾರಣಿಗಳ ಮಕ್ಕಳಿಗೆ ಹೀಗಾಗಿದ್ರೆ ಬಿಡುತ್ತಿದ್ದರಾ. ಈಗಲೂ ಸೌಜನ್ಯ ಳಿಗೆ ನ್ಯಾಯ ಸಿಗದಿದ್ದಲ್ಲಿ ನ್ಯಾಯವೇ ನಾಶವಾದಂತೆ ಎಂದರು. ಸನಾತನ ಧರ್ಮ ಉಳಿಯಬೇಕಾದರೆ ಈ ಪ್ರಕರಣಕ್ಕೆ ನ್ಯಾಯ ಸಿಗಲೇಬೇಕು ಎಂದರು.
ಸೆಪ್ಟೆಂಬರ್ 3 ರಂದು ಬೆಳ್ತಂಗಡಿಯಲ್ಲಿ ಎಲ್ಲ ವರ್ಗದ, ಎಲ್ಲ ಧರ್ಮದ ಪ್ರತಿಯೊಬ್ಬ ನ್ಯಾಯಪರ ಜನರಿಂದ ಸೌಜನ್ಯ ಪ್ರಕರಣ ಮರುತನಿಖೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ. ಅಲ್ಲಿ ಲಕ್ಷ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ನೀವು ಕೂಡ ಹೋರಾಟಕ್ಕೆ ಅಂದು ಬರಬೇಕು ಎಂದು ಸೇರಿದ್ದವರಿಗೆ ಮನವಿ ಮಾಡಿದರು. ಅಂದಿನ ಹೋರಾಟ ದೇಶದ ಪ್ರಧಾನಿ, ಗೃಹ ಮಂತ್ರಿಯ ಕಣ್ಣು ತೆರೆಸಬೇಕು ಎಂದು ಆಶಿಸಿದರು.
ಸೌಜನ್ಯ ಪ್ರಕರಣದ ಮರುತನಿಖೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಟ್ವೀಟ್ ಅಭಿಯಾನ ಆರಂಭವಾಗಿದ್ದು, ಮಂಗಳೂರಿನಲ್ಲಿ ನಡೆದ ಸೌಜನ್ಯ ಕೊಲೆ ಅತ್ಯಾಚಾರ ಮರು ತನಿಖೆ ಒತ್ತಾಯಿಸಿ ಪ್ರತಿಭಟನೆ ವೇಳೆ ಟ್ವೀಟ್ ಅಭಿಯಾನದ ಬ್ಯಾನರ್ ಬಿಡುಗಡೆ ಮಾಡಲಾಯಿತು. ದೇಶದ ಸುಪ್ರೀಂ ಕೋರ್ಟ್ , ರಾಷ್ಟ್ರಪತಿ ಭವನ, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಅಭಿಯಾನದ ಟ್ವೀಟ್ ಟ್ಯಾಗ್ ಮಾಡಬೇಕೆಂದು ಒತ್ತಾಯಿಸಿದ ಬ್ಯಾನರ್ ಬಿಡುಗಡೆ ಗೊಳಿಸಲಾಯಿತು ಎಂದು ವರದಿ ತಿಳಿಸಿದೆ