ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸರಿಯಾದ ತನಿಖೆ ನಡೆಸಿಲ್ಲ ಎಂದು ರಾಜ್ಯದ ವಿವಿಧೆಡೆ ಹೋರಾಟಗಳು ನಡೆಯುತ್ತಿದೆ.
ಇದರ ಭಾಗವಾಗಿ ನ್ಯಾಯಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆ.28 ರಂದು ಬೆಳಗ್ಗೆ 10 ಗಂಟೆಯಿಂದ ರಾಜ್ಯ ಮಟ್ಟದ ‘ಚಲೋ ಬೆಳ್ತಂಗಡಿ’ ಮಹಾಧರಣಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆ.22 ರಂದು ನಾರಾಯಣ ಗುರು ಸಭಾಭವನದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಬಂಗೇರ, ಕೆಲವರು ಸೌಜನ್ಯಳಿಗೆ ನ್ಯಾಯ ಸಿಗಬಾರದೆಂದು ಆ.28 ರಂದು ಬೆಳ್ತಂಗಡಿ ಯಲ್ಲಿ ಧರಣಿ ಇಲ್ಲ ಎಂದು ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ.
ಆ.28 ರಂದು ರಾಜ್ಯಮಟ್ಟದ ಹೋರಾಟ ಬೆಳ್ತಂಗಡಿ ಯಲ್ಲಿ ಚಲೋ ಬೆಳ್ತಂಗಡಿ ನಡೆಯಲಿದೆ ಹಾಗೂ ತಾಲೂಕು ಕಚೇರಿ ಮುಂಭಾಗ ಮಹಾಧರಣಿ ನಡೆಯಲಿದೆ. ಸುಳ್ಳು ಸುದ್ದಿಗಳಿಗೆ ಸುಳ್ಳು ವದಂತಿಗಳಿಗೆ ಬಲಿಯಾಗದೆ ಸೌಜನ್ಯಳ ನ್ಯಾಯದ ನಿರೀಕ್ಷೆಯಲ್ಲಿರುವ ಎಲ್ಲಾ ಜನರು, ಕರ್ನಾಟಕ ರಾಜ್ಯದ ಜನಪರ ಸಂಘಟನೆಗಳು ಒಂದಾಗಿ ಈ ಧರಣಿ ನಡೆಸುವುದರಿಂದ ತಾಲೂಕಿನ ಜನಪರ ಸಂಘಟನೆಗಳು, ಸಮಾಜಸೇವಾ ಸಂಘಟನೆಗಳು, ಪ್ರಜ್ಞಾವಂತ ನಾಗರಿಕರು, ರೈತರು, ಕಾರ್ಮಿಕರು,ಶೋಷಿತರು, ದಲಿತರು, ಹಿಂದುಳಿದ ವರ್ಗದವರು, ಮಹಿಳೆಯರು ವಿದ್ಯಾರ್ಥಿ ಮತ್ತು ಯುವಜನರು ದೊಡ್ಡ ಸಂಖ್ಯೆ ಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ವಕೀಲರು ಹಾಗೂ ಕಾರ್ಮಿಕ ಮುಖಂಡರಾದ ಬಿ.ಎಂ ಭಟ್, ವಕೀಕರು ಮನೋಹರ್, ತಣ್ಣೀರುಪಂತ ಗ್ರಾ.ಪಂ ಅಧ್ಯಕ್ಷರು ಜಯವಿಕ್ರಮ್ ಕಲ್ಲಾಪು ಉಪಸ್ಥಿತರಿದ್ದರು.