ನ್ಯೂಸ್ ನಾಟೌಟ್ : ಸೌಜನ್ಯಳಿಗೆ ನ್ಯಾಯಕ್ಕಾಗಿ ಹೋರಾಟದ ಕಾವು ದಿನೇ ದಿನೇ ಹೆಚ್ಚುತ್ತಲೇ ಇದೆ. ರಾಜ್ಯ ಮಾತ್ರವಲ್ಲದೇ ಹೊರರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿದ್ದು, ನೈಜ ಆರೋಪಿಗಳನ್ನು ಬಂಧಿಸಬೇಕೆನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.ಈ ಬೆನ್ನಲ್ಲೇ ಗೃಹಸಚಿವರು ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.ಸೌಜನ್ಯ ಕೇಸ್ ಮುಗಿದ ಅಧ್ಯಾಯವೆಂದು ಹೇಳಿದ್ದಾರೆ.
ಧಾರವಾಡದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಮಾತನಾಡುತ್ತಾ,” ಸೌಜನ್ಯ ಕೇಸ್ ಮುಗಿದ ಅಧ್ಯಾಯವಾಗಿದೆ.ಕಾನೂನಾತ್ಮಕವಾಗಿ ಆ ಕೇಸ್ ಮುಗಿದು ಹೋಗಿದೆ.ಜನರ ಆಗ್ರಹದಲ್ಲಿ ಜನರ ಪರ ವಿರೋಧ ಇದ್ದೇ ಇರುತ್ತದೆ.ಅದಕ್ಕೆ ಏನು ಮಾಡಲು ಬರೋದಿಲ್ಲ ಎಂದಿದ್ದಾರೆ. ಕೆಲವರು ಕೇಸ್ ಮಾಡಲು ಒತ್ತಾಯಿಸುತ್ತಾರೆ.ಸದ್ಯ ಕೇಸ್ ರೀ-ಓಪನ್ ಮಾಡಲು ಆಗೋದಿಲ್ಲ”ಎಂದು ಸಚಿವರು ಹೇಳಿದ್ದಾರೆ.
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2012ರಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಪ್ರಕರಣ ಇನ್ನೂ ಸಹ ಮುಕ್ತಾಯಗೊಂಡಿಲ್ಲ. ಅತ್ಯಾಚಾರ ಎಸಗಿದವ ಯಾರೆಂಬ ಸತ್ಯ ಇನ್ನೂ ಹೊರಬಂದಿಲ್ಲ. ಈ ಪ್ರಕರಣದ ಬಗ್ಗೆ ಸುಮಾರು 11 ವರ್ಷಗಳಿಂದ ಚರ್ಚೆಯಾಗುತ್ತಿದ್ದರೂ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಲು ಇದುವರೆಗೂ ಸಾಧ್ಯವಾಗಿಲ್ಲ.
ಸೌಜನ್ಯ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಫೇಸ್ಬುಕ್, ಟ್ವಿಟರ್ ಅಪ್ಲಿಕೇಶನ್ಗಳಲ್ಲಿ ‘ಜಸ್ಟಿಸ್ ಫಾರ್ ಸೌಜನ್ಯ’ ಅಭಿಯಾನ ಆರಂಭ ಆಗಿದೆ. ನೆಟ್ಟಿಗರು ಈ ಕುರಿತು ಸಾಕಷ್ಟು ಟ್ವೀಟ್ ಮಾಡಿ ತಮ್ಮ ಕೋಪವನ್ನು ಹೊರಹಾಕುತ್ತಿದ್ದು, ಸೆಲೆಬ್ರಿಟಿಗಳೂ ಸಹ ಈ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ನಟ ದುನಿಯಾ ವಿಜಯ್ ಈ ಕುರಿತು ತಮ್ಮ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದರು. ಈ ಬಳಿಕ ಒಳ್ಳೆ ಹುಡ್ಗ ಪ್ರಥಮ್ ಸೌಜನ್ಯ ಪ್ರಕರಣದ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಈ ಘಟನೆ ನಡೆದಿದ್ದು 2012ರ ಅಕ್ಟೋಬರ್ 09ರಂದು. ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅವರನ್ನು ಅಪಹರಿಸಿ ಅತ್ಯಾಚಾರ ಹಾಗೂ ಕೊಲೆ ಮಾಡಲಾಗಿತ್ತು. ಅದೇ ದಿನ ರಾತ್ರಿ ಮಿಸ್ಸಿಂಗ್ ಕೇಸ್ ಕೂಡ ದಾಖಲಾಯಿತು. 2012ರ ಅಕ್ಟೋಬರ್ 10 ರಂದು ಧರ್ಮಸ್ಥಳ ಗ್ರಾಮದ ಮಣ್ಣಸಂಖದಲ್ಲಿ ಆಕೆ ಶವ ಪತ್ತೆ ಆಯಿತು. ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂತೋಷ್ ರಾವ್ ಅವರು ನಿರ್ದೋಷಿ ಎಂದು ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.
ಆದರೆ ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳು ಯಾರು?ಸೌಜನ್ಯಳನ್ನು ಅಪಹರಿಸಿ ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆ ಎದ್ದಿದೆ.ನಿಜವಾದ ಆರೋಪಿಗಳನ್ನು ಪತ್ತೆ ಮಾಡಿ ಅವರಿಗೆ ಸರಿಯಾದ ಶಿಕ್ಷೆ ನೀಡಿ ಎನ್ನುವ ಬಗ್ಗೆ ಅಲ್ಲಲ್ಲಿ ಪ್ರತಿಭಟನೆಗಳು ನಡಿತಿವೆ.