ನ್ಯೂಸ್ ನಾಟೌಟ್ :ಕಳೆದ ಹನ್ನೊಂದು ವರ್ಷಗಳ ಹಿಂದೆ ಅತ್ಯಾಚಾರ ಹಾಗೂ ಭೀಕರ ಕೊಲೆಗೀಡಾದ್ದ ಪಾಂಗಾಳದ ಅಪ್ರಾಪ್ತ ಬಾಲಕಿ ಸೌಜನ್ಯ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಅಲ್ಲಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ.ಸುಳ್ಯದಲ್ಲಿ ಪ್ರತಿಭಟನೆ ನಡೆದ ಬಳಿಕ ಇದೀಗ ಅಗಸ್ಟ್ 14ರಂದು ಪುತ್ತಿಲ ಪರಿವಾರ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರತಿಭಟನೆ ನಡೆಯಲಿದೆ.ಅಗಸ್ಟ್ 28ರಂದು ‘ಚಲೋ ಬೆಳ್ತಂಗಡಿ’ ಬೃಹತ್ ಪ್ರತಿಭಟನೆ ಕೂಡ ನಡೆಯಲಿದೆ.
ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ನೈಜ ಆರೋಪಿಗಳು ಯಾರು?ಅವರನ್ನು ಮರುತನಿಖೆ ನಡೆಸಿ ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ವಿಧಿಸಿವಂತೆ ಒತ್ತಾಯಗಳು ಇದೀಗ ಹೆಚ್ಚುತ್ತಿವೆ.ಸರಕಾರಕ್ಕೂ ಈ ಕುರಿತಂತೆ ಮನವಿ ಮಾಡಲಾಗಿದ್ದು,ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಹೇಳಲಾಗಿದೆ.ಸದ್ಯ ಧರ್ಮಸ್ಥಳದ ಸೌಜನ್ಯ ಪ್ರಕರಣ ಮರು ತನಿಖೆ ಆಗ್ರಹ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಮಂಗಳೂರಿನಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಸಿಬಿಐ ವರದಿ ಕೊಟ್ಟಾಗಿದೆ.ಆದರೆ ಈಗ ಸಾಕಷ್ಟು ಜನ ಇದರ ಮರು ತನಿಖೆಗೆ ಒತ್ತಾಯಿಸ್ತಾ ಇರುವುದು ನಮ್ಮ ಗಮನಕ್ಕೆ ಬಂದಿದೆ.ಇದು ಸರ್ಕಾರದ ಮಟ್ಟದಲ್ಲಿದ್ದು, ಸರ್ಕಾರ ಮಾಹಿತಿ ತರಿಸಿಕೊಳ್ಳುತ್ತಿದೆ ಎಂದು ಹೇಳಿದರು. ಸಿಎಂ ಮತ್ತು ಗೃಹ ಇಲಾಖೆ ಕೇಸ್ ಡಿಟೈಲ್ಸ್ ಬರಲಿ ಎಂದು ಹೇಳಿದ ಅವರು ಇದರ ತೀರ್ಮಾನ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ ಎಂದರು.
ನಾನು ಮರು ತನಿಖೆ ಮಾಡಿ ಅಥವಾ ಮಾಡಬೇಡಿ ಅಂತ ಹೇಳಲು ಹೋಗೋದಿಲ್ಲ.ಇದರ ಆಧಾರಗಳ ಮಾಹಿತಿ ಬಂದ ನಂತರವಷ್ಟೇ ಗೃಹ ಸಚಿವರ ಜೊತೆ ಮಾತನಾಡ್ತೀನಿ ಎಂದು ಹೇಳಿದ ಅವರು ಸರ್ಕಾರದ ಮಟ್ಟದಲ್ಲಿ ಮರು ತನಿಖೆ ಬಗ್ಗೆ ತೀರ್ಮಾನ ಆಗಲಿದ್ದು,ನಾನು ಕೂಡ ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಸೌಜನ್ಯ ಹತ್ಯೆ ಪ್ರಕರಣ ಹನ್ನೊಂದು ವರ್ಷದ ಹಿಂದೆ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ಸಮೀಪದ ಕಾಡಿನಲ್ಲಿ ಬೆಳಕಿಗೆ ಬಂದಿತ್ತು. ಭೀಕರ ಅತ್ಯಾಚಾರಕ್ಕೀಡಾಗಿ ಸೌಜನ್ಯಳನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಆರೋಪಿ ಎಂದು ಬಂಧಿಸಲಾಗಿತ್ತು. ಹನ್ನೊಂದು ವರ್ಷದ ನಂತರ ಆತ ನಿರಪರಾಧಿ ಎಂದು ಕೋರ್ಟ್ ಬಿಡುಗಡೆ ಮಾಡಿದೆ. ಹಾಗಾದರೆ ಅಪರಾಧಿ ಯಾರು ಅನ್ನುವ ಪ್ರಶ್ನೆ ಇದೀಗ ಎದ್ದಿದೆ. ಸೌಜನ್ಯ ಹತ್ಯೆ ನಡೆಸಿದವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.