ನ್ಯೂಸ್ ನಾಟೌಟ್: ಸಮುದ್ರದ ನಡುವೆ ಹೃದಯಾಘಾತಕ್ಕೆ ಒಳಗಾದ ಚೀನಾ(China) ಪ್ರಜೆಯನ್ನು ರಕ್ಷಣೆ ಮಾಡುವ ಮೂಲಕ ಭಾರತೀಯ ಕರಾವಳಿ ಭದ್ರತಾಪಡೆ ಮಾನವೀಯತೆಯನ್ನು ಮೆರೆದಿದೆ ಈ ಬಗ್ಗೆ ಭಾರತೀಯ ಕರಾವಳಿ ಭದ್ರತಾಪಡೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಚೀನಾದಿಂದ ಯುಕೆಗೆ ತೆರಳುತ್ತಿದ್ದ ಸಂಶೋಧನ ನೌಕೆಯಲ್ಲಿದ್ದ ಸಿಬ್ಬಂದಿ ವೈಗ್ಯಾಂಗ್ ಎಂಬಾತನಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ವೈದ್ಯರ ನೆರವು ಅಗತ್ಯವಾದ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಮಾರಿಟೈಮ್ ರೆಸ್ಕ್ಯೂ ಕೋ-ಆರ್ಡಿನೇಶನ್ ಸೆಂಟರ್ಗೆ ಮಾಹಿತಿ ರವಾನೆ ಮಾಡಿದ್ದರು. ಕೂಡಲೇ ಭಾರತೀಯ ಸಿಬ್ಬಂದಿ, ನೌಕೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಮಾತನಾಡಿ ಅಗತ್ಯ ಸಲಹೆಗಳನ್ನು ನೀಡಿದ್ದರು ಏನ್ನಲಾಗಿದೆ.
16-17ನೇ ತಾರೀಖಿನ ಮಧ್ಯ ರಾತ್ರಿ ಘಟನೆ ನಡೆದಿದ್ದು, ಅರಬ್ಬಿ ಸಮುದ್ರದಲ್ಲಿ ಮುಂಬೈ ಸಮುದ್ರ ತೀರದಿಂದ ಸುಮಾರು 200 ಕಿಲೋ ಮೀಟರ್ ದೂರದಲ್ಲಿರುವ ‘ಎಂವಿ ಡಾಂಗ್ ಫಾಂಗ್ ಕಾನ್ ಟೌನ್ ನಂಬರ್ 2’ ಎಂಬ ಸಂಶೋಧನ ನೌಕೆಯಲ್ಲಿದ್ದ ಚೀನಾ ಪ್ರಜೆಯನ್ನು ರಕ್ಷಣೆ ಮಾಡಲಾಗಿದೆ.
ನೌಕೆಯಲ್ಲಿದ್ದ ಚೀನಾ ಪ್ರಜೆಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು, ಹವಾಮಾನ ಸ್ಥಿತಿ ಅನುಕೂಲಕರವಾಗಿ ಇಲ್ಲದಿದ್ದರು ರೋಚಕ ಕಾರ್ಯಾಚರಣೆ ನಡೆಸಿದ ಭದ್ರತಾಪಡೆ ಕಗ್ಗತ್ತಲಲ್ಲಿ ಚೀನಾ ಪ್ರಜೆಗೆ ವೈದ್ಯಕೀಯ ಸೌಲಭ್ಯ (Medical Facility) ಕೊಟ್ಟು ಆತನ ಜೀವವನ್ನು ರಕ್ಷಣೆ ಮಾಡಿದೆ.
ರೋಗಿಗೆ ವೈದ್ಯಕೀಯ ನೆರವು ಬೇಕಾಗಿದ್ದ ಕಾರಣ ಭಾರತೀಯ ಕರಾವಳಿ ಭದ್ರತಾಪಡೆ ಸಿಬ್ಬಂದಿ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಸಿಜಿ ಎಎಲ್ಹೆಚ್ ಎಂಕೆ-2 ಮೂಲಕ ಹೇರ್ ಲಿಫ್ಟ್ ಮಾಡಿ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗುವಂತೆ ಮಾಡಿದೆ. ಆ ಬಳಿಕ ಹೆಚ್ಚಿನ ವೈದ್ಯಕೀಯ ನೆರವಿಗಾಗಿ ನೌಕೆಯ ಸಿಬ್ಬಂದಿಗೆ ರೋಗಿಯನ್ನು ಹಸ್ತಾಂತರ ಮಾಡಿದ್ದಾರೆ.
ಸಮುದ್ರದ ನಡುವೆ ಕಗ್ಗತ್ತಲ ರಾತ್ರಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಿಜಿ ಎಎಲ್ ಎಚ್ ಮತ್ತು ಸಿಜಿಎಎಸ್ ಡ್ಯಾಮನ್ ಸಿಬ್ಬಂದಿ, ವಿದೇಶಿ ಪ್ರಜೆಯ ಪ್ರಾಣವನ್ನು ಉಳಿಸಿದ್ದಾರೆ. ಅಲ್ಲದೇ, ಘಟನೆ ಬಳಿಕ “ನಾವು ರಕ್ಷಿಸುತ್ತೇವೆ” ಎಂಬ ಭಾರತೀಯ ಕೋಸ್ಟ್ ಗಾರ್ಡ್ನ ಘೋಷನೆಯನ್ನು ಬರೆದುಕೊಂಡಿದೆ.