ನ್ಯೂಸ್ ನಾಟೌಟ್: ಸೌಜನ್ಯ (Sowjanya Case) ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಈಗ ದೇಶ ವ್ಯಾಪಿಯಾಗಿ ಸುದ್ದಿಯಾಗುತ್ತಿದೆ. ರಾಜ್ಯದಲ್ಲಿ ಹಲವಾರು ಸಂಘ ಸಂಸ್ಥೆಗಳು ಈಗ ಸೌಜನ್ಯ ಹತ್ಯೆಯನ್ನು ಖಂಡಿಸಿ ಧ್ವನಿ ಎತ್ತುತ್ತಿದ್ದಾರೆ. ಇದೀಗ ರಾಜ್ಯದ ಸಿನಿಮಾ ನಟರು ಕೂಡ ಸೌಜನ್ಯ ಹತ್ಯೆ ಖಂಡಿಸಿ ಧ್ವನಿ ಎತ್ತಿದ್ದಾರೆ. ನಿಜವಾದ ಆರೋಪಿಗಳನ್ನು ಆದಷ್ಟು ಬೇಗ ಹಿಡಿದು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸುವುದಕ್ಕೆ ಆರಂಭಿಸಿದ್ದಾರೆ. ಅಂತಹವರ ಪೈಕಿ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಕೂಡ ಒಬ್ಬರು ಅನ್ನೋದು ವಿಶೇಷ.
ಹೌದು, ಹನ್ನೊಂದು ವರ್ಷಗಳ ಹಿಂದೆ ಹತ್ಯೆಯಾದ ಸೌಜನ್ಯಳ ಪರವಾಗಿ ದುನಿಯಾ ವಿಜಯ್ ಸಾಮಾಜಿಕ ಜಾಲತಾಣದ ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ನೈಜ ಆರೋಪಿಗಳನ್ನು ಆದಷ್ಟು ಬೇಗ ಹಿಡಿಯಬೇಕು ಅನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಸತ್ಯ ಅನ್ನುವುದು ಸೂರ್ಯನ ಬೆಳಕಿದ್ದಂತೆ ಹೆಚ್ಚು ಸಮಯ ಮರೆಮಾಚಲಾಗದು ಎಂದು ಬುದ್ಧನ ವಿಚಾರವನ್ನು ಬರೆದುಕೊಂಡು ಸೂಕ್ಷ್ಮವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ನ್ಯಾಯ ಸಿಗುವವರೆಗೆ ಆ ದೇವರ ದರ್ಶನ ಮಾಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ವಿಚಾರ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಸಾವಿರಾರು ಜನರು ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ಬಹಳಷ್ಟು ಜನರು ಪರ ವಿರೋಧವಾಗಿ ಮಾತನಾಡಿರುವ ಸೌಜನ್ಯ ಕೊಲೆ ಪ್ರಕರಣದಲ್ಲಿ ಬಹಳಷ್ಟು ವಿಚಾರಗಳು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆಯೂ ಇಲ್ಲ, ವಿವರವೂ ಇಲ್ಲ. ಸೌಜನ್ಯ ಎಂಬ ಯುವತಿಯ ಕೊಲೆಗೆ ನ್ಯಾಯ ಸಿಗಬೇಕೆಂದು ಈಗ ಒಕ್ಕೊರಲಿನಿಂದ ಜನರು ಕೇಳಿ ಕೊಳ್ಳುತ್ತಿದ್ದಾರೆ.
ಸೌಜನ್ಯ ಅಮಾಯಕ ಹುಡುಗಿ. ಆಕೆಯನ್ನು ಹತ್ಯೆ ಮಾಡಿರುವುದು ಯಾರೇ ಆಗಿರಲಿ, ಅವರನ್ನು ಆದಷ್ಟು ಬೇಗ ಬಂಧಿಸುವಂತಹ ಕೆಲಸ ಆಗಬೇಕು. ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಸತ್ಯದ ಕಣ್ಣಿಗೆ ಮಣ್ಣೆರಚಿ ಅಡಗಿ ಕುಳಿತಿರವ ಸೌಜನ್ಯ ಹಂತಕರಿಗೆ ಶಿಕ್ಷೆ ಆಗಲೇಬೇಕು. ಈ ನಿಟ್ಟಿನಲ್ಲಿ ಸೆಲೆಬ್ರಿಟಿಗಳು ಧ್ವನಿ ಎತ್ತಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಧರ್ಮಸ್ಥಳದ ಸೌಜನ್ಯ ಪ್ರಕರಣ ಈಗ ತೆರೆಯ ಮೇಲೆ ಬರಲು ಸಿದ್ಧವಾಗಿದ್ದು, ಫಿಲ್ಮ್ ಚೇಂಬರ್ ನಲ್ಲಿ (Film Chamber) ಟೈಟಲ್ ರಿಜಿಸ್ಟ್ರೆಷನ್ ಕೂಡಾ ನಡೆದಿದೆ. ಸ್ಟೋರಿ ಆಫ್ ಸೌಜನ್ಯ (Story Of Sowjanya) ಎಂಬ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ. ನಿರ್ದೇಶಕ ಲವ ನಿರ್ದೇಶನದಲ್ಲಿ ಮೂಡಿಬರಲಿದೆ ಸ್ಟೋರಿ ಆಫ್ ಸೌಜನ್ಯ ಮೂಡಿಬರಲಿದೆ.ಇದೊಂದು ಸಾಮಾಜಿಕ ಚಿತ್ರವಾಗಿರಲಿದೆ ಎಂದು ಹೇಳಲಾಗಿದೆ.
ಜಿ.ಕೆ.ವೆಂಚರ್ಸ್ ಸಿನಿಮಾ ನಿರ್ಮಾಣವನ್ನ ಮಾಡಲಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯಾಗೆ ನ್ಯಾಯ ಸಿಗಬೇಕೆಂದು ಅಭಿಯಾನಗಳು ನಡೆಯುತ್ತಿವೆ. ರಾಜ್ಯದ ಹಲವು ಭಾಗಗಳಲ್ಲಿ ಹಳ್ಳಿಗಳಲ್ಲಿಯೂ ಜನರು ಸೌಜನ್ಯ ಪರ ಧ್ವನಿ ಎತ್ತುತ್ತಿದ್ದಾರೆ. ಇದಲ್ಲದೆ ಬಹಳಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ಜಸ್ಟೀಸ್ ಫಾರ್ ಸೌಜನ್ಯ ಎಂದ ಹ್ಯಾಶ್ಹ್ಯಾಗ್ಗಳನ್ನು ಟ್ರೆಂಡ್ ಮಾಡುತ್ತಿದ್ದಾರೆ.
ಸೌಜನ್ಯ ಹೆಸರಲ್ಲಿ ಯಾವುದೇ ಸಿನಿಮಾ ತರುವುದಕ್ಕೆ ನಮ್ಮ ಅನುಮತಿ ಇಲ್ಲ ಎಂದು ಸೌಜನ್ಯ ಮಾವ ವಿಠಲ ಗೌಡ ಇತ್ತೀಚಿಗೆ ಸ್ಪಷ್ಟಪಡಿಸಿದ್ದರು.
ಈ ಬಗ್ಗೆ ಮಾತನಾಡಿದ್ದ ಅವರು, ಸೌಜನ್ಯಳಿಗೆ ನ್ಯಾಯ ಸಿಗಬೇಕು ಅನ್ನುವುದಷ್ಟೇ ನಮ್ಮ ಹೋರಾಟ. ಸಿನಿಮಾ ಮಾಡಿ ದುಡ್ಡು ಮಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಯಾವ ಸಿನಿಮಾ ಮಾಡುವವರು ಕೂಡ ಇದುವರೆಗೆ ನಮ್ಮನ್ನು ಭೇಟಿಯಾಗಿಲ್ಲ, ಸಿನಿಮಾದ ಬಗ್ಗೆ ಮಾತನಾಡಿಲ್ಲ. ಯಾರಾದರೂ ಸಿನಿಮಾ ಮಾಡಲು ಮುಂದಾದರೆ ಹೈಕೋರ್ಟ್ ನಿಂದ ಅದಕ್ಕೆ ತಡೆ ತರುತ್ತೇವೆ ಎಂದು ತಿಳಿಸಿದ್ದರು.