ನ್ಯೂಸ್ ನಾಟೌಟ್: ಬಹುಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಈಗಾಗಲೇ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಸ್ಟಾರ್ ತಾರೆಯರ ಮದುವೆಯ ಬಗ್ಗೆ ವದಂತಿಗಳು ಹಬ್ಬುವುದೇನು ಹೊಸತಲ್ಲ. ಅನೇಕರು ಇಂತಹ ವಿಚಾರವಾಗಿ ಪ್ರತಿಕ್ರಿಯಿಸುತ್ತಾರೆ. ಕೆಲವರು ಮಾತನಾಡಲು ನಿರಾಕರಿಸುತ್ತಾರೆ. ಆದರೆ ರಶ್ಮಿಕಾ ಮಂದಣ್ಣ ಮಾತ್ರ ‘ನಾನು ಈಗಾಗಲೇ ಮದುವೆಯಾಗಿದ್ದೇನೆ’ ಎಂದು ಹೇಳುವ ಮೂಲಕ ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ.
ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ಅಡಿ ನಿರ್ಮಾಣವಾದ ಕಿರಿಕ್ ಪಾರ್ಟಿ ಚಿತ್ರ 2016ರ ಡಿಸೆಂಬರ್ 30ರಂದು ತೆರೆ ಕಂಡಿತ್ತು. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಇವರಿಬ್ಬರ ಆನ್ ಸ್ಕ್ರೀನ್ ಪ್ರೇಮಕಥೆ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಬಳಿಕ ಇವರಿಬ್ಬರು ಪ್ರೀತಿಯಲ್ಲಿದ್ದರು. ಎರಡು ಕುಟುಂಬಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ನಂತರದ ಕೆಲವು ದಿನಗಳಲ್ಲಿ ಇವರಿಬ್ಬರ ಸಂಬಂಧ ಮುರಿದುಬಿತ್ತು.
ಸದ್ಯ ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗೀತ ಗೋವಿಂದಂ, ಡಿಯರ್ ಕಾಮ್ರೇಡ್ನಂತಹ ಹಿಟ್ ಚಿತ್ರಗಳಲ್ಲಿ ಸ್ಕ್ರೀನ್ ಶೇರ್ ಮಾಡಿರುವ ಈ ರೂಮರ್ ಲವ್ ಬರ್ಡ್ಸ್, ಆನ್ಸ್ಕ್ರೀನ್ನಲ್ಲಿ ಸಿನಿಮಾಗಳು ಹಿಟ್ ಆಗುತ್ತಿದ್ದಂತೆ, ಅಭಿಮಾನಿಗಳು ಈ ಇಬ್ಬರೂ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರಾ? ಎಂದು ಊಹಿಸಲು ಪ್ರಾರಂಭಿಸಿದರು. ಆದ್ರೆ ಈ ಜೋಡಿ ಮಾತ್ರ ಆಪ್ತ ಸ್ನೇಹಿತರು ಎಂದು ಹೇಳಿಕೊಂಡು ಬಂದಿದೆ. ಆದರೆ ಇಬ್ಬರ ನಡುವೆ ಪ್ರೀತಿ ಇದೆ ಎಂಬುದಕ್ಕೆ ಅನೇಕ ಘಟನೆಗಳು, ಸಂದರ್ಭಗಳು ಸಾಕ್ಷಿಯಾಗಿವೆ.
ಇದೀಗ ರಶ್ಮಿಕಾ ಮಂದಣ್ಣ ತಮ್ಮ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ಹೀರೋ ಟೈಗರ್ ಶ್ರಾಫ್ ಜೊತೆ ಸಿನಿಮಾ ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ ಆ್ಯಂಕರ್, ನಿಮ್ಮ ಮದುವೆ ಯಾವಾಗ? ಎಂಬ ಪ್ರಶ್ನೆಯನ್ನು ರಶ್ಮಿಕಾಗೆ ಕೇಳಿದ್ದರು. ತಮಾಷೆಯ ಉತ್ತರವನ್ನು ಕೊಟ್ಟ ನಟಿ, “ನಾನು ಈಗಾಗಲೇ ಮದುವೆಯಾಗಿದ್ದೇನೆ. ನಾನು ನರುಟೊನನ್ನು (ಕಾರ್ಟೂನ್ ಪಾತ್ರ) ವಿವಾಹವಾಗಿದ್ದೇನೆ. ಅವನನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಮನಸ್ಸಿನಲ್ಲಿ ಅವನೊಬ್ಬನೇ ಇದ್ದಾನೆ” ಎಂದು ತಮಾಷೆ ಮಾಡಿದ್ದಾರೆ.
ಈ ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ‘ನರುಟೊ’ ನಿಮಗೆಲ್ಲಾ ಗೊತ್ತಿರುವುದೇ. ‘ಎನಿಮೆ’ ಕಾರ್ಟೂನ್ ಸಿರೀಸ್ನಲ್ಲಿ ಬರುವ ಒಂದು ಪಾತ್ರವಷ್ಟೇ. ಇಂತಹ ಕಾರ್ಟೂನ್ಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಕಾರ್ಟೂನ್ ಪಾತ್ರವನ್ನು ಇಷ್ಟಪಡುತ್ತಾರೆ. ಅಂತಹವರಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಒಬ್ಬರು.