ನ್ಯೂಸ್ ನಾಟೌಟ್ : ಈ ಬಾರಿ ಮುಸ್ಲಿಂ ಸಹೋದರಿಯರ ಜತೆ ರಕ್ಷಾ ಬಂಧನ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಸೂಚನೆ ನೀಡಿದ್ದಾರೆ. ಸೋಮವಾರ (ಜುಲೈ 31) ರಾತ್ರಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ನ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ಡಿಎ) ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿ ಸಿದ್ಧತೆಗಳನ್ನು ನಡೆಸುತ್ತಿದೆ. ತ್ರಿವಳಿ ತಲಾಖ್ ನಿಷೇಧಿಸುವ ತಮ್ಮ ಸರ್ಕಾರದ ನಿರ್ಧಾರವು ಮುಸ್ಲಿಂ ಮಹಿಳೆಯರಲ್ಲಿ ಭದ್ರತೆಯ ಭಾವನೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬರುವ ರಕ್ಷಾ ಬಂಧನ ಹಬ್ಬದಲ್ಲಿ ಸಾಧ್ಯವಾದಷ್ಟು ಮುಸ್ಲಿಂ ಮಹಿಳೆಯರನ್ನು ತಲುಪಿ ಅವರಿಗೆ ಸಹೋದರರಾಗಿ ನಾವಿದ್ದೇವೆ ಎಂಬ ಧೈರ್ಯ ತುಂಬಲು ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರನ್ನು ತಲುಪಲು ರಕ್ಷಾ ಬಂಧನದ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಪ್ರಧಾನಿ ಕೇಳಿಕೊಂಡರು ಎಂದು ಸಭೆಯಲ್ಲಿದ್ದ ಕೆಲವು ಸಂಸದರು ಹೇಳಿದ್ದು , ರಕ್ಷಾ ಬಂಧನದ ಹಬ್ಬವು ಈ ವರ್ಷ ಆಗಸ್ಟ್ 30ರಂದು ನಡೆಯಲಿದೆ.
ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಯನ್ನು 2019ರಲ್ಲಿ ಸಂಸತ್ತು ಅಂಗೀಕರಿಸಿತ್ತು. ತ್ರಿವಳಿ ತಲಾಖ್ ಅಭ್ಯಾಸವನ್ನು ಕಾನೂನುಬಾಹಿರ ಎಂದು ಘೋಷಿಸಿತು.
ಈ ಅಪರಾಧಕ್ಕಾಗಿ ಪತಿಗೆ ಜೈಲು ಶಿಕ್ಷೆ ವಿಧಿಸಬಹುದು. ಉತ್ತರ ಪ್ರದೇಶದ ಸಂಸದರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಸಮಾಜ ಮತ್ತು ದೇಶಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಜನರ ಆಶೀರ್ವಾದ ನಮ್ಮ ಮೇಲಿದೆ ಎಂದರು. ಸರ್ಕಾರದ ಕೆಲಸಗಳ ಬಗ್ಗೆ ಸಕಾರಾತ್ಮಕ ಸಂದೇಶದೊಂದಿಗೆ ಸಾರ್ವಜನಿಕರ ಬಳಿಗೆ ಹೋಗುವಂತೆ ಸಂಸದರಿಗೆ ಕರೆ ನೀಡಿದ ಪ್ರಧಾನಿ ಮೋದಿ, ಜನರ ನಡುವೆ ಗರಿಷ್ಠ ಸಮಯವನ್ನು ಕಳೆಯುವಂತೆ ಹೇಳಿದ್ದಾರೆ ಎನ್ನಲಾಗಿದೆ.