ನ್ಯೂಸ್ ನಾಟೌಟ್: ದೇಶಾದ್ಯಂತ ರಾಖಿ ಸಂಭ್ರಮ ಜೋರಾಗಿದೆ. ಅಣ್ಣ-ತಂಗಿಯ ಪವಿತ್ರ ಸಂಬಂಧಕ್ಕೊಂದು ಅರ್ಥ ಕೊಡುವ ರಾಖಿ ಹಬ್ಬವನ್ನು ಯೋಧರ ಜೊತೆ ಮಹಿಳೆಯರು, ಯುವತಿಯರು, ಮಕ್ಕಳು ಆಚರಿಸಿಕೊಂಡು ಸಂಭ್ರಮಿಸಿದರು.
ಅಣ್ಣನಿಂದ ರಕ್ಷೆ ಬೇಡುವ ತಂಗಿಯು ರಾಖಿ ಕಟ್ಟುತ್ತಾಳೆ. ಅಣ್ಣ ಆಕೆಗೆ ಪ್ರೀತಿಯಿಂದ ಉಡುಗೊರೆ ನೀಡುತ್ತಾನೆ, ರಕ್ಷಣೆಯ ಭರವಸೆ ಕೊಡುತ್ತಾನೆ. ರಾಖಿ ಹಬ್ಬವನ್ನು ಮುಸ್ಲಿಂ ಸಮುದಾಯದವರೂ ಕೂಡ ಆಚರಿಸಿದರು. ‘ಥ್ಯಾಂಕ್ಸ್ ಜವಾನ್’ ಅಭಿಯಾನದ ಅಡಿಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆ ಬೋನಿಯಾರ್ ನಲ್ಲಿ ಮುಸ್ಲಿಂ ಯುವತಿಯರು ಸೈನಿಕರಿಗಾಗಿಯೇ ವಿಶೇಷ ರಾಖಿ ತಯಾರಿಸಿದ್ದಾರೆ.
ಉಳಿದಂತೆ ಚತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ರಕ್ಷಾ ಬಂಧನ ಸಂಭ್ರಮ ಮನೆ ಮಾಡಿದೆ. ಸಾಲುಗಟ್ಟಿ ಬಂದ ಮಹಿಳೆಯರು ಸಿಆರ್ ಪಿಎಫ್ ಯೋಧರ ಕೈಗೆ ರಾಖಿ ಕಟ್ಟುವ ಮೂಲಕ ಸಹೋದರತ್ವವನ್ನು ಜಗತ್ತಿಗೆ ಸಾರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿಯಲ್ಲಿ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ. ಬಿಎಸ್ಎಫ್ ಯೋಧರ ಕೈಗೆ ರಾಖಿ ಕಟ್ಟುವ ಮೂಲಕ ಶಾಲಾ ಮಕ್ಕಳು ಸಂತಸ ಹಂಚಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉಧಮ್ಪುರದಲ್ಲಿ ಶಾಲಾ ಬಾಲಕಿಯರು ಸಿಆರ್ ಪಿಎಫ್ ಯೋಧರ ಕೈಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಅಖ್ನೂರ್ ಸೆಕ್ಟರ್ ನಲ್ಲಿ ದೇಶದ ಗಡಿ ಕಾಯುವ ಯೋಧರಿಗೆ ಸ್ಥಳೀಯ ಯುವತಿಯರು ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು.