ನ್ಯೂಸ್ ನಾಟೌಟ್ : ಹಲವರು ತುಳುವನ್ನು ಕನ್ನಡದಲ್ಲಿ ಬರೆಯುತ್ತಾರೆ ಆದರೆ ತುಳು ಭಾಷೆಯ ಲಿಪಿಗೆ ಸಾವಿರಾರು ವರ್ಷಗಳ ಇತಿಹಾಸ ವಿದೆ ಎನ್ನುವುದನ್ನು ತುಳು ಅಧ್ಯಯನಕಾರರು ಹಲವು ರೂಪದಲ್ಲಿ ರುಜುವಾತು ಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವತಿ ತುಳು ಭಾಷೆಯಲ್ಲೇ ಭಗವದ್ಗೀತೆ ಬರೆಯುವ ಮೂಲಕ ತುಳು ಭಾಷೆಗೆ ಹೊಸ ಕೊಡುಗೆ ನೀಡಿದ್ದಾರೆ.
ಪುತ್ತೂರಿನ ನರಿಮೊಗರಿನ ಕೊಡಂಕೇರಿ ನಿವಾಸಿ ಅಪರ್ಣಾ ಈ ಸಾಧಕಿ. ಭರತನಾಟ್ಯ ಕಲಾವಿದೆಯೂ ಆಗಿರುವ ಅಪರ್ಣಾ ಈಗ ಭಗವದ್ಧೀತೆಯ 18 ಅಧ್ಯಾಯದ ಶ್ಲೋಕ ಮತ್ತು ಸಾರವನ್ನು ತುಳು ಲಿಪಿಯಲ್ಲಿ ಮತ್ತು ಕನ್ನಡ ಲಿಪಿಯ ಮೂಲಕ ತುಳುವಿನಲ್ಲಿ ಬರೆದಿದ್ದಾರೆ.
ಹಿಂದೂ ಧರ್ಮದ ಪವಿತ್ರ ಗ್ರಂಥ ‘ಭಗವದ್ಗೀತೆ’ಯನ್ನು ತುಳು ಲಿಪಿಯನ್ನು ಬಳಸಿ ಅನುವಾದಿಸಿ ಮೊದಲ ಪ್ರಯತ್ನದಲ್ಲೇ ಅಪರ್ಣಾ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಸರಳವಲ್ಲದ ತುಳು ಭಾಷೆಯಲ್ಲಿ ಭಗವದ್ಗೀತೆ ಬರೆದಿದ್ದಾರೆ.
ಅಪರ್ಣಾ ಅವರ ಈ ಪುಸ್ತಕವನ್ನು ಇತ್ತೀಚಿಗೆ ಶ್ರೀಕ್ಷೇತ್ರ ನರಸಿಂಹ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು, ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮತ್ತು ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋಧನಾ ಕೇಂದ್ರದ ಆನಂದತೀರ್ಥ ಸಗ್ರಿ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ.
ಕೋವಿಡ್ ಸಮಯದಲ್ಲಿ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಅಪರ್ಣಾ ಕೊಡಂಕೇರಿ ತನ್ನ ಸಹೋದರ ಮುಕುಂದ ಅವರು ಕಲಿಸಿಕೊಟ್ಟ ತುಳು ಲಿಪಿಯನ್ನು ಅಭ್ಯಾಸ ಮಾಡಿ ಬರೆಯಲು ಶುರು ಮಾಡಿದ್ದರು. ತುಳು ಮಾತೃಭಾಷೆಯ ಜನಕ್ಕೆ ತುಳುವಲ್ಲಿ ಬರೆದರೆ, ಮಾತನಾಡಿದರೆ ಅದು ಹೃದಯಕ್ಕೆ ತೀರಾ ಹತ್ತಿರವಾಗಿರುತ್ತೆ ಎನ್ನುವ ಕಾರಣಕ್ಕೆ ಭಗವದ್ಗೀತೆಯ 18 ಅಧ್ಯಾಯದ ಶ್ಲೋಕದ ಸಾರ ಹಾಗು ತಾತ್ಪರ್ಯಗಳನ್ನು ತುಳು ಲಿಪಿ ಮತ್ತು ಕನ್ನಡ ಲಿಪಿಯನ್ನು ಬಳಸಿ ತುಳುವಲ್ಲಿ ಅಪರ್ಣಾ ಬರೆದಿದ್ದಾರೆ.
(Source: One India Kannada)