ನ್ಯೂಸ್ ನಾಟೌಟ್ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸರ್ ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ‘ರಂಗಭೂಮಿ, ಸಿನಿಮಾ ಮತ್ತು ಸಮಾಜ’ ವಿಷಯದ ಸಂಬಂಧ ಸಂವಾದ ಆಯೋಜಿಸಿತ್ತು. ಸಂವಾದದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಪಾಲ್ಗೊಂಡಿದ್ದರು. ಆದರೆ ಕಾಲೇಜಿನ ವಿದ್ಯಾರ್ಥಿಗಳು ಪ್ರಕಾಶ್ ರಾಜ್ ಅವರಿಗೆ ಧಿಕ್ಕಾರ ಕೂಗಿದ್ದಲ್ಲದೆ, ಅವರು ಭೇಟಿ ನೀಡಿದ ಸ್ಥಳಕ್ಕೆ ಗೋ ಮೂತ್ರ ಸಿಂಪಡಿಸಿ, ನೀರು ಹಾಕಿ ಶುದ್ಧೀಕರಣ ಮಾಡಿದ ಘಟನೆ ನಡೆದಿದೆ.
ಸರ್ ಎಂವಿ ಕಾಲೇಜಿನ ವಿದ್ಯಾರ್ಥಿಗಳು ಪ್ರಕಾಶ್ ರಾಜ್ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ತುಕ್ಡೇ ಗ್ಯಾಂಗ್ನ ರುವಾರಿ ಎಂದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳನ್ನು ಹೊರಗಿಟ್ಟು ಕಾರ್ಯಕ್ರಮ ನಡೆಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಭದ್ರಾವತಿಯ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಪ್ರಕಾಶ್ ರಾಜ್ ಮುಖ್ಯ ಅತಿಥಿ ನೆಲೆಯಲ್ಲಿ ‘ರಂಗಭೂಮಿ, ಸಿನಿಮಾ ಮತ್ತು ಸಮಾಜ’ ವಿಷಯದ ಸಂಬಂಧ ಸಂವಾದ ಆಯೋಜಿಸಿತ್ತು.
ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆಯುತ್ತಿದ್ದ ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು. ಅವರು ಒಳನುಗ್ಗದಂತೆ ಪೊಲೀಸರು ತಡೆದಿದ್ದಾರೆ. ಬ್ಯಾರಿಕೇಡ್ ಹಾಕಿ, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ತಡೆದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಬಿಜೆಪಿ ಮುಖಂಡರು ಸಾಥ್ ನೀಡಿದ್ದರು ಎನ್ನಲಾಗಿದೆ. ಪೊಲೀಸರ ಜತೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದರು.
ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಶಿವಮೊಗ್ಗದಲ್ಲಿ ಪ್ರತಕರ್ತರ ಜತೆಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದಾರೆ. ಶಿವಮೊಗ್ಗದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ನಟ ಪ್ರಕಾಶ್ ರಾಜ್ , ‘ ಮಾನವೀಯತೆ ತುಳಿಯುವವರ ವಿರುದ್ಧ ನಾವು ಪ್ರೀತಿಯಿಂದ ನಿಲ್ಲುತ್ತಿದ್ದೇವೆ.
ನಮಗೆ ದ್ವೇಷ ಬೇಕಿಲ್ಲ, ನಮಗೆ ಬೇಕಿರೋದು ಪ್ರೀತಿ. ಎಲ್ಲರಲ್ಲೂ ಸಮಾನತೆ ಇರಬೇಕು. ನಮ್ಮ ಕ್ರೌರ್ಯ, ವಿರೋಧ ದೇಶ ಹಾಳಾಗಲು ಕಾರಣವಾಗುತ್ತದೆ. ರಾಜ್ಯ ಗ್ಯಾರಂಟಿ ಯೋಜನೆಗಳು ಜನಪರವಾಗಿವೆ. ಇದರಿಂದ ಜನರಿಗೆ ಒಳ್ಳೆಯದಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗಳ ವಿರೋಧಿಸಿದ್ದಾರೆ. ಅವರ ಯೋಜನೆಗಳೇ ದೇಶದಲ್ಲಿ ಫೇಲ್ಯೂರ್ ಆಗಿವೆ. ಈ ಬಗ್ಗೆ ಮಾತನಾಡುವವರು ಯಾರು? ಅವರದ್ದು 5 ವರ್ಷ ಮುಗಿಯುತ್ತೆ ಅವರೇನು ದೇವರಲ್ಲ.
ನಿಮಗೆ ನಾನು ವೋಟ್ ಹಾಕಿದರೂ, ಹಾಕದೇ ಇದ್ದರೂ ಪ್ರಶ್ನೆ ಮಾಡುವ ಅಧಿಕಾರ ಇದೆ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಪ್ರಕಾಶ್ ರಾಜ್ ಭೇಟಿ ನೀಡಿದ್ದ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗೋ ಮೂತ್ರ ಮತ್ತು ನೀರು ಹಾಕಿ ಶುದ್ಧೀಕರಣ ನಡೆಸಿದರು. ಇದು ಪ್ರಕಾಶ್ ರಾಜ್ ಓಡಾಡಿದ ಜಾಗ ಎಂದು ಶುದ್ಧೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.