ನ್ಯೂಸ್ ನಾಟೌಟ್: ಬಹುಭಾಷಾ ನಟ ಪ್ರಕಾಶ್ ರಾಜ್ ಗೆ ಸಂಘ ಪರಿವಾರದ ಕಾರ್ಯಕರ್ತನೋರ್ವ ಜೀವ ಬೆದರಿಕೆ ಹಾಕಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ. ಪ್ರಕಾಶ್ ರಾಜ್ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳ ಗ್ರಾಮದ ಸೌಜನ್ಯ ಪ್ರಕರಣದ ಬಗ್ಗೆ ಶಿವಮೊಗ್ಗದಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಪ್ರಕಾಶ್ ರಾಜ್ , ʼʼಗುಪ್ತಚರ ಇಲಾಖೆಗೆ ಅನುಮಾನಗಳಿದ್ದರೆ ಎಲ್ಲರನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆʼʼ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಂಘ ಪರಿವಾರದ ಕಾರ್ಯಕರ್ತ ಸಂತೋಷ್ ಕಾರ್ತಾಳ್ ಎಂಬಾತ, ನಮ್ಮವರ ಕ್ಷಮೆ ಕೇಳದಿದ್ದರೆ 24 ಗಂಟೆಯೊಳಗಡೆ ನಿನ್ನ ಮನೆ ಮುಂದೆ ನಿನ್ನ ಹೆಣ ಬಿದ್ದಿರುತ್ತದೆʼʼ ಎಂದು ಕೊ*ಲೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ʼʼನೊಡ್ರಪಾ.. ಉತ್ತರ ಕುಮಾರರು .. ಕೊಲೆ ಬೆದರಿಕೆ ಹಾಕ್ತಾ ಇದ್ದಾರೆ .. ಏನ್ ಮಾಡಾಣ ವಸಿ ಯೋಳಿʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ.ಜಿ ಪರಮೇಶ್ವರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ.
ಸೌಜನ್ಯ ಪ್ರಕರಣದ ಮರು ತನಿಖೆಯ ಕೂಗು ಹೆಚ್ಚುತ್ತಿದ್ದಂತೆ ಆಗಸ್ಟ್ 8 ರಂದು ಸುಳ್ಯದಲ್ಲಿ ಬೃಹತ್ ಜಾಥ ನಡೆದಿತ್ತು. ಜೊತೆಗೆ ಮಹೇಶ್ ಶೆಟ್ಟಿ ತಿಮರೋಡಿ ನ್ಯಾಯಕ್ಕಾಗಿ ಗರ್ಜಿಸಿದ್ದರು. ಇದರ ಬೆನ್ನಲ್ಲೆ ಬಹುಭಾಷಾ ನಟ ಪ್ರಕಾಶ್ ರಾಜ್ ಈ ಬಗ್ಗೆ ಮಾತನಾಡಿ, ಗುಪ್ತಚರ ಇಲಾಖೆಗೆ ಅನುಮಾನಗಳಿದ್ದರೆ ಯಾರನ್ನು ಬೇಕಾದರೂ ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆ. ಪೊಲೀಸರು ಇದನ್ನು ನೋಡಿಕೊಳ್ಳುತ್ತಾರೆ. ಸತ್ಯ ಹೊರಗೆ ಬಂದೇ ಬರುತ್ತದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಕ್ಕೆ ಹಿಂದೂ ಕಾರ್ಯಕರ್ತ ಎಂದು ಹೇಳಲಾಗಿರುವ ಸಂತೋಷ್ ಕಾರ್ತಾಳ್ ಎಂಬಾತ ಪ್ರಕಾಶ್ ರಾಜ್ ಗೆ ಬೆದರಿಕೆ ಹಾಕಿದ್ದಾರೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯದಾದ್ಯಂತ ಭಾರಿ ಹೋರಾಟಗಳು ನಡೆಯುತ್ತಿವೆ. ಸೌಜನ್ಯ ಸಾವಿನ ಹಿಂದಿರುವ ನಿಗೂಢ ಶಕ್ತಿಗಳನ್ನು ಬಂಧಿಸಬೇಕು ಅನ್ನುವ ಒತ್ತಾಯಗಳು ಕೂಡ ಕೇಳಿ ಬರುತ್ತಿದೆ. ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಮತ್ತು ಕುಟುಂಬಸ್ಥರು ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಮೈಸೂರಿನಲ್ಲೂ ಪ್ರತಿಭಟನೆ ನಡೆದಿದೆ. ಮುಂದೆ ಮುಂಬೈನಲ್ಲೂ ಪ್ರತಿಭಟನೆ ನಡೆಯುವುದಕ್ಕಿದೆ.
ಸೌಜನ್ಯ ಹತ್ಯೆ ಪ್ರಕರಣದ ಹಿಂದೆ ನಿಗೂಢ ಕೈಗಳಿದ್ದು ಅವರು ಸಾಕ್ಷಿಗಳನ್ನು ನಾಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ನ್ಯಾಯಯುತ ತನಿಖೆಗೆ ಈಗ ಆಗ್ರಹಿಸಲಾಗಿದೆ. ಮುಂದೆ ಈ ತನಿಖೆ ಎಲ್ಲಿ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. ಏಕೆಂದರೆ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಎಲ್ಲವನ್ನೂ ನಾಶ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.