ನ್ಯೂಸ್ ನಾಟೌಟ್ : ದಿವಂಗತ ಸ್ಪಂದನಾ ವಿಜಯರಾಘವೇಂದ್ರ ಅವರ ಪ್ರಕರಣದಲ್ಲಿ ಆದಂತೆ, ವಿದೇಶದಲ್ಲಿ ಭಾರತೀಯರು ಮೃತಪಟ್ಟರೆ ಅಲ್ಲಿಂದ ಮೃತದೇಹ ಪಡೆದುಕೊಳ್ಳಲು ಹಲವು ಬಾರಿ 2 ರಿಂದ 3 ದಿನಗಳೇ ಹಿಡಿಯುತ್ತವೆ ಕೆಲವೊಮ್ಮೆ ಅದಕ್ಕೂ ಹೆಚ್ಚು ಸಮಯ, ಖರ್ಚು ಮತ್ತು ಓಡಾಟಗಳು ನಡೆಸಬೇಕಾಗುವುದು. ಹಲವರಿಗೆ ಇರುವ ಪ್ರಶ್ನೆಗಳೆಂದರೆ ಅಷ್ಟು ತಡವಾಗಲು ಕಾರಣವೇನು, ಅಲ್ಲಿ ಕುಟುಂಬಸ್ಥರು ಪಾಲಿಸಬೇಕಾದ ನಿಯಮಗಳೇನು ಎಂಬುದು. ಇದಕ್ಕೆ ಉತ್ತರ ಕೊಡುವ ಉದ್ದೇಶದಿಂದಲೇ ಈ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ.
ಮೃತ ಪಟ್ಟ ಬಗ್ಗೆ ಪೊಲೀಸರು ಕರೆ ಮಾಡುತ್ತಾರೆ, ಅವರು ನಿಮ್ಮ ರಾಯಭಾರ ಕಚೇರಿಯನ್ನು ಸಂಪರ್ಕಿಸುತ್ತಾರೆ ಮತ್ತು ನಿಮ್ಮ ಕುಟುಂಬಕ್ಕೆ ತಿಳಿಸಲು ರಾಯಭಾರ ಕಚೇರಿಯು ನಿಮ್ಮ ತಾಯ್ನಾಡಿನ ಪೊಲೀಸರನ್ನು ಸಂಪರ್ಕಿಸುತ್ತದೆ. ಕುಟುಂಬಕ್ಕೆ ಅಂತ್ಯಕ್ರಿಯೆಯ ಮನೆಗಳ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ.
ರಾಯಭಾರ ಕಚೇರಿಯು ಆ ಮಾಹಿತಿಯನ್ನು ವಿದೇಶದಲ್ಲಿರುವ ಅಧಿಕಾರಿಗಳಿಗೆ ರವಾನಿಸುತ್ತದೆ, ಅವರು ದೇಹವನ್ನು ಆ ಅಂತ್ಯಕ್ರಿಯೆಯ ಮನೆಗೆ ಬಿಡುಗಡೆ ಮಾಡುತ್ತಾರೆ ಮತ್ತು ಬಿಡುಗಡೆಗೂ ಮುನ್ನ ಈ ಕೆಳಗೆ ಕೊಟ್ಟಿರುವ ಮೂರು ಆಯ್ಕೆಗಳನ್ನು ಅವರು ವಾರಿಸುದಾರರಿಗೆ ನೀಡುತ್ತಾರೆ ಮತ್ತು ಅಲ್ಲಿನ ಆಂತರಿಕ ಕಾನೂನಾತ್ಮಕ ಮತ್ತು ಇತರ ದಾಖಲೆಗಳ ತಯಾರಿಗೆ ಮತ್ತು ಅನುಮತಿಗೆ ಬಹಳಷ್ಟು ವಿಧಾನಗಳಿವೆ.
- ವಿದೇಶದಲ್ಲಿ ಶವವನ್ನು ಹೂಳಬೇಕೋ ಅಥವಾ
- ಅವುಗಳನ್ನು ದಹಿಸಿ ಮತ್ತು ಚಿತಾಭಸ್ಮವನ್ನು ಹಿಂತಿರುಗಿಸಬೇಕೋ ಅಥವಾ
- ದೇಹವನ್ನು ಸ್ವದೇಶಕ್ಕೆ ಕಳುಹಿಸಿಕೊಡುವುದೋ
ಎಂಬುದರ ಬಗ್ಗೆ ಕುಟುಂಬವು ನಿರ್ಧಾರ ತೆಗೆದುಕೊಳ್ಳುತ್ತದೆ. ಆಯಾಯ ದೇಶ ಮತ್ತು ಅಲ್ಲಿನ ಕಾನೂನು ಪ್ರಕ್ರಿಯೆಗಳ ಆಧಾರದಲ್ಲಿ ಬದಲಾವಣೆಗಳಿರುತ್ತವೆ ಮತ್ತು ಅಧಿಕ ಸಮಯ ವ್ಯಯವಾಗುತ್ತದೆ. ಜೊತೆಗೆ ಸಾವಿನ ಕಾರಣವೂ ಇದಕ್ಕೆ ಬಹುಮುಖ್ಯ ಮಾನದಂಡವಾಗಿದೆ. ಅಸಹಜ ಸಾವುಗಳಾದರೆ ಕೊಲೆ, ಪ್ರಾಕೃತಿಕ ವಿಕೋಪ, ಯುದ್ಧ ಮುಂತಾದ ಸಂದರ್ಭಗಳಲ್ಲಿ ಕಾನೂನು ಪ್ರಕ್ರಿಯೆ ಮತ್ತು ವೈದ್ಯಕೀಯ ಪ್ರಕ್ರಿಯೆಗಳು ಜೊತೆಗೆ ಸ್ವದೇಶಕ್ಕೆ ರವಾನಿಸುವಾಗಿನ ದಾಖಲೆಗಳ ಪ್ರಕ್ರಿಯೆ ಬಹಳಷ್ಟಿರುತ್ತವೆ ಮತ್ತು ವಿದೇಶಗಳಲ್ಲಿ ಅನುಮತಿ ಪಡೆಯಬೇಕಾದ ಇಲಾಖೆಗಳ ಸಂಖ್ಯೆಯೂ ದೊಡ್ಡದಿರುತ್ತದೆ ಮತ್ತು ಅಲ್ಲಿನ ಪ್ರಕ್ರಿಯೆಗಳ ಬಗ್ಗೆ ಸಮರ್ಪಕ ಮಾಹಿತಿ ಇರದಿದ್ದರೆ ಮತ್ತಷ್ಟು ತಡವಾಗಲು ಮತ್ತು ಹಣ ವ್ಯಯವಾಗಲು ಕಾರಣವಾಗುತ್ತವೆ.
ನೀವು ಟೂರಿಸ್ಟ್ ಆಗಿದ್ದರೆ ಮತ್ತು ಪ್ರಯಾಣ ವಿಮೆಯನ್ನು ಹೊಂದಿದ್ದರೆ ಅದರ ವೆಚ್ಚಗಳನ್ನು ಇದರ ಮೂಲಕ ಬಳಸಬಹುದಾಗಿದೆ.
ಆದರೆ ಇಂತಹಾ ವಿಮೆಗಳಿಲ್ಲದಿದ್ದಲ್ಲಿ ಕುಟುಂಬವು ಭಾರೀ ವೆಚ್ಚವನ್ನು ವಿದೇಶಕ್ಕೆ ರವಾನಿಸಲು ಭರಿಸಬೇಕಾಗುತ್ತದೆ. ಇನ್ನು ಮರಣೋತ್ತರ ಪರೀಕ್ಷೆಯ ಬಳಿಕ ಅದರ ದೃಢೀಕೃತ ಪ್ರತಿಯು ಆಯಾ ದೇಶದ ಆಡಳಿತ ಭಾಷೆಗಳಲ್ಲಿರುತ್ತದೆ ಅದನ್ನು ಇಂಗ್ಲಿಷ್ ಅಥವಾ ಸ್ವದೇಶಿಯ ಭಾಷೆಗೆ ಭಾಷಾಂತರ ಮಾಡಿಸಿ ಅದಕ್ಕೆ ಮತ್ತೆ ಆಯಾಯಾ ವಿಭಾಗಗಳ ಮತ್ತು ಅಲ್ಲಿನ ವೈಧ್ಯರ ಸಹಿ ಮತ್ತು ದೃಢೀಕರಣ ಮಾಡಿಸಿ ಅದನ್ನು ಪಡೆದುಕೊಳ್ಳಬೇಕಾಗುತ್ತದೆ.
ಇನ್ನು ಕುಟುಂಬಸ್ಥರು ಮರಣದ ಕಾರಣ ತಿಳಿದ ಮೇಲೆ ಪೊಲೀಸ್ ರಿಪೋರ್ಟ್ ಜೊತೆಗೆ ಡೆತ್ ಸರ್ಟಿಫಿಕೇಟ್ ಪಡೆದಿರಬೇಕಾಗುತ್ತದೆ. ಈ ವೇಳೆ ಮೃತರ ಪಾಸ್ ಪೋರ್ಟ್ ವಿಸಾ ಜೊತೆಗಿರಬೇಕು ಮತ್ತು ಅಲ್ಲಿನ ದಾಖಲೆಗಳಲ್ಲಿ ಈ ಪಾಸ್ ಪೋರ್ಟ್ ವಿಸಾದಲ್ಲಿರುವ ಮಾಹಿತಿ ಹೊಂದಿಕೆಯಾಗಬೇಕು. ಆ ಬಳಿಕ ಅಗತ್ಯದಾಖಲೆಗಳ ಜೊತೆಗೆ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಅಲ್ಲಿಂದ ಅಗತ್ಯ ಪ್ರಕ್ರಿಯೆಗಳನ್ನು ಮಾಡಿಸಿಕೊಳ್ಳಬೇಕು. ಈ ಎಲ್ಲ ದಾಖಲೆಗಲನ್ನು ಮತ್ತೆ ಏರ್ ಪೋರ್ಟ್ ನಲ್ಲಿ ಅಧಿಕಾರಿಗಳಿಗೆ ನೀಡಿ ಅಲ್ಲಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
ದೇಹವನ್ನು ಸ್ವದೇಶಕ್ಕೆ ಕಳುಹಿಸುವ ನಿರ್ಧಾರವನ್ನು ತೆಗೆದುಕೊಂಡರೆ, ವಿದೇಶಿ ಅಂತ್ಯಕ್ರಿಯೆಯ ನಿರ್ದೇಶಕರು ಸೂಕ್ತವಾದ ವಿಮಾನಗಳನ್ನು ಹುಡುಕಲು ಪ್ರಯತ್ನಿಸಬೇಕು ಕಾರಣ, ಎಲ್ಲಾ ವಿಮಾನಯಾನ ಸಂಸ್ಥೆಗಳು ಇದನ್ನು ಮಾಡುವುದಿಲ್ಲ. ಕುಟುಂಬವು ವಿಮಾನಯಾನ ಸಂಸ್ಥೆಯಿಂದ ದೇಹವನ್ನು ಮರಳಿ ಸ್ವದೇಶದಲ್ಲಿ ತೆಗೆದುಕೊಳ್ಳಲು ಸ್ಥಳೀಯವಾಗಿ ಅಂತ್ಯಕ್ರಿಯೆಯ ನಿರ್ದೇಶಕರನ್ನು ಸಂಪರ್ಕಿಸಿ ಅಲ್ಲಿನ ದಾಖಲೆಗಳ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ
ಇನ್ನು ದಿವಂಗತ ಸ್ಪಂದನಾ ವಿಜಯರಾಘವೇಂದ್ರ ವಿಷಯದಲ್ಲೂ ಇಂತಹದ್ದೇ ಪ್ರಕ್ರಿಯೆಗಳ ಕಾರಣಕ್ಕಾಗಿ ವಿಳಂಬವಾಗಿತ್ತು. ಬ್ಯಾಂಕಾಕ್ ಪ್ರವಾಸದ ಸಂದರ್ಭದಲ್ಲಿ ಹಠಾತ್ ಹೃದಯ ಸ್ತಂಭನದಿಂದ ಮೃತಪಟ್ಟ ಸ್ಪಂದನಾ ವಿಜಯ ರಾಘವೇಂದ್ರ (Spandana vijay Raghavendra) ಅವರ ಪಾರ್ಥಿವ ಶರೀರವನ್ನು (Dead body) ಮಂಗಳವಾರ ಸಂಜೆಯ ವೇಳೆಗೆ ಆಸ್ಪತ್ರೆಯಿಂದ ಬಿಟ್ಟು ಕೊಡುವುದಕ್ಕೆ ದಿನಗಳೇ ಕಳೆಯಿತು.
ತಮ್ಮ ಕುಟುಂಬದ ಸೋದರ ಸಂಬಂಧಿಗಳ ಜತೆ ಎಂಟು ದಿನಗಳ ಹಿಂದೆ ಬ್ಯಾಂಕಾಕ್ಗೆ ತೆರಳಿದ್ದ ಸ್ಪಂದನಾ ಭಾನುವಾರ ಸಂಜೆ ಶಾಪಿಂಗ್ ಮುಗಿಸಿದ ಬಳಿಕ ಲೋ ಬಿಪಿಗೆ ಒಳಗಾಗಿ ಕುಸಿದುಬಿದ್ದಿದ್ದರು. ಈ ಮಾಹಿತಿಯನ್ನು ಪಡೆದ ನಟ ವಿಜಯ ರಾಘವೇಂದ್ರ ಅವರು ತುರ್ತಾಗಿ ಬ್ಯಾಂಕಾಕ್ಗೆ ತೆರಳಿದ್ದರು. ಅವರು ತಲುಪುವ ಹೊತ್ತಿಗೆ ಸ್ಪಂದನಾ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಈ ನಡುವೆ ಅವರನ್ನು ಬ್ಯಾಂಕಾಕ್ನ ಕೆಸಿಎಂಎಚ್ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಲಾಗಿತ್ತು. ಸೋಮವಾರ ಸ್ಪಂದನಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಆದರೆ, ಮೃತದೇಹ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.
ಬ್ಯಾಂಕಾಕ್ನಲ್ಲಿನ ಹೋಟೆಲ್ನಲ್ಲಿ ಸ್ಪಂದನಾ ಸಾವು ಸಂಭವಿಸಿರುವುದರಿಂದ ಕಾನೂನಾತ್ಮಕ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ ಎಂದು ಹೇಳಲಾಗಿದೆ. ಮೃತದೇಹವನ್ನು ಹೋಟೆಲ್ನಿಂದ ಆಸ್ಪತ್ರೆಗೆ ತಂದಿರುವುದರಿಂದ ಸಾವಿನ ಕಾರಣವನ್ನು ಆಸ್ಪತ್ರೆಯವರು ಕೂಡಾ ಪತ್ತೆ ಹಚ್ಚಬೇಕಾಗಿರುವುದರಿಂದ ವಿಳಂಬವಾಗಿದೆ. ಈ ನಡುವೆ ಆಸ್ಪತ್ರೆಯ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದರೂ ಮೃತದೇಹ ರವಾನೆಗೆ ಇನ್ನಷ್ಟು ಸಮಯಾವಕಾಶ ಬೇಕಾಗುತ್ತದೆ. ಅಲ್ಲಿನ ಎಲ್ಲ ದಾಖಲೆಗಳು ಥಾಯ್ ಭಾಷೆಯಲ್ಲಿರುತ್ತವೆ. ಅದನ್ನು ಇಂಗ್ಲಿಷ್ಗೆ ಭಾಷಾಂತರಿಸಿ ಅದನ್ನು ಭಾರತೀಯ ವಿದೇಶಾಂಗ ಇಲಾಖೆಗೆ ರವಾನಿಸಬೇಕಾಗುತ್ತದೆ. ಅಲ್ಲಿ ಎಲ್ಲ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಮೃತದೇಹ ರವಾನೆಗೆ ಅವಕಾಶ ಕೊಡಲಾಗುತ್ತದೆ.