ನ್ಯೂಸ್ ನಾಟೌಟ್: ಕಾಂಗ್ರೆಸ್ ಇಷ್ಟು ವರ್ಷಗಳ ಕಾಲದಿಂದ ದೇಶವನ್ನು ಆಳಿದೆ. ಆದರೆ ಯಾವುದೇ ಅಭಿವೃದ್ಧಿ ಕೆಲಸಗಳು ಮಾತ್ರ ಆಗಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಮೃತ್ ಭಾರತ್ ರೈಲ್ವೆ ನಿಲ್ದಾಣಗಳ ಪುನರ್ ನಿರ್ಮಾಣ ಕಾಮಗಾರಿ ಶಿಲಾನ್ಯಾಸದಲ್ಲಿ ಮಂಗಳೂರು ಜಂಕ್ಷನ್ ಗೆ ಶಿಲಾನ್ಯಾಸ ನೆರವೇರಿಸಿದ ಬೆನ್ನಲ್ಲೇ ನಳಿನ್ ಕುಮಾರ್ ಮಾತನಾಡಿದರು. ಮಂಗಳೂರು ಜಂಕ್ಷನ್ ನಿಲ್ದಾಣ 19 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಲಿದೆ. ಅಂತರಾಷ್ಟ್ರೀಯ ದರ್ಜೆಯ ನಿಲ್ದಾಣ ನಿರ್ಮಾಣವಾಗಲಿದೆ ಎನ್ನುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತ್ಞತೆಗಳನ್ನು ಸಲ್ಲಿಸುವುದಕ್ಕೆ ಇಷ್ಟಪಡುತ್ತೇನೆ ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಸುದೀರ್ಘ ವರ್ಷ ಆಡಳಿತವನ್ನು ನಡೆಸಿದೆ. ಇಷ್ಟು ವರ್ಷ ಕಾಂಗ್ರೆಸ್ ಆಡಳಿತದಲ್ಲಿದ್ದರೂ ಹಳ್ಳಿಗಳಲ್ಲಿ ಯಾಕೆ ಶಾಲೆಗಳು ಅಭಿವೃದ್ಧಿ ಆಗಿಲ್ಲ, ಆಸ್ಪತ್ರೆಗಳಿಲ್ಲ ರಸ್ತೆಗಳ ನಿರ್ಮಾಣ ಯಾಕೆ ಆಗಿರಲಿಲ್ಲ, ಚರಂಡಿ ಮೋರಿಗಳ ನಿರ್ಮಾಣ ಯಾಕೆ ಆಗಿರಲಿಲ್, ಕಾಂಗ್ರೆಸ್ ಕಾಲ ಘಟ್ಟದಲ್ಲಿ ಯಾಕೆ ರೈಲ್ವೆ ಕ್ಷೇತ್ರ ಅಭಿವೃದ್ದಿ ಕಾಣಲಿಲ್ಲ ಎಂದು ನಳಿನ್ ಕೈ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮುಂದುವರಿದು ಮಾತನಾಡಿದ ನಳಿನ್, ಕಳೆದ ಆರೇಳು ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಮಹತ್ತರ ಪರಿವರ್ತನೆಗಳು ಬದಲಾವಣೆ ಅಭಿವೃದ್ಧಿ ಯಾಗಿದೆ. ಇವರು ಕೇವಲ ಆಶ್ವಾಸನೆಗಳ ಮೂಲಕ ದೇಶವನ್ನು ಮುನ್ನಡೆಸಿದ್ದರು, ವಿಶ್ವಾಸದಿಂದ ನಾವು ಮುನ್ನಡೆಸುತ್ತಿದ್ದೇವೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಇಡೀ ದೇಶದಲ್ಲಿ ವಿಶ್ವಾಸ ಬಂದಿದೆ ಎಂದು ತಿಳಿಸಿದರು.
ದೇಶದಲ್ಲಿ ವಿಕಾಸ ಯಾತ್ರೆಗಳು ನಡೆಯುತ್ತಿವೆ. ವಿಕಾಸ ಯಾನ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳು ಅಭಿವೃದ್ದಿ ಕಾಮಗಾರಿಗಳು ಕುಂಠಿತಗೊಳಿಸುತ್ತವೆ. ಅವರದೇ ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ಗ್ಯಾರೆಂಟಿ ಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ನಳಿನ್ ಕುಟುಕಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಂಗಡಿ ತೆರೆದು ಕೊಂಡಿದ್ದಾರೆ. ಒಂದೊಂದು ಅಧಿಕಾರಿಗಳಿಗೂ ರೇಟ್ ಫಿಕ್ಸ್ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ತಾಲೂಕು ನಗರ ಪಾಲಿಕೆ ಕಚೇರಿಗಳಿಗೆ ಹೋಗಲು ಆಗುತ್ತಿಲ್ಲ. ಭಾರೀ ಭ್ರಷ್ಟಾಚಾರ ನಡೆಯುತ್ತಿದೆ, ಅಂಗಡಿ ಓಪನ್ ಆಗಿದೆ ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ.
ಬಿಜೆಪಿ ಶಾಸಕರು ಇದರ ವಿರುದ್ದ ಎಲ್ಲಾ ರೀತಿಯ ಹೋರಾಟ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ತತ್ವದ ಮೇಲೆ ನಮ್ಮ ಶಾಸಕರು ಹೋರಾಟ ಮಾಡಿದಾಗ ಅವರನ್ನು ಅಮಾನತು ಮಾಡುವ ನೀಚ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಕಾಂಗ್ರೆಸ್ ಮಾಡುತ್ತಿದೆ ಎಂದು ನಳಿನ್ ತೀವ್ರವಾಗಿ ಟೀಕಿಸಿದ್ದಾರೆ.