ನ್ಯೂಸ್ ನಾಟೌಟ್: ಕರಾವಳಿ ಜನರ ಬಹು ದಿನದ ಬೇಡಿಕೆ ನೆರವೇರುವ ಕ್ಷಣ ಬಂದೇ ಬಿಟ್ಟಿದೆ. ಆಗಸ್ಟ್6ರಂದು ಮಂಗಳೂರು ಜಂಕ್ಷನ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣದ ಶಿಲಾನ್ಯಾಸ ನೆರವೇರಲಿದೆ.
ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆ ಅಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣ ತಲೆ ಎತ್ತಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಈ ರೈಲು ನಿಲ್ದಾಣವು ಸುಮಾರು ರೂ. 19.32 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 2023-24ನೇ ಸಾಲಿನ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಸೇರಿದಂತೆ ಮಂಗಳೂರು ಕೇಂದ್ರ ನಿಲ್ದಾಣ, ಬಂಟ್ವಾಳ ಹಾಗೂ ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದೆಂದು ಘೋಷಿಸಲಾಗಿತ್ತು.
ಈ ಯೋಜನೆಯ ಇತರೆ ರೈಲು ನಿಲ್ದಾಣಗಳ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಮಾತ್ರವಲ್ಲ ಇಂತಹ ಯೋಜನೆಯನ್ನು ಜಿಲ್ಲೆಯ ಜನರಿಗೆ ನೀಡಿರುವುದಕ್ಕೆ ನಳಿನ್ ಕುಮಾರ್ ಕಟೀಲ್ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.