ಈಗಲೋ ಆಗಲೋ ಕುಸಿಯುವ ಭೀತಿಯಲ್ಲಿರುವ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವುದಕ್ಕೂ ಭಯ ಪಡುವ ಸ್ಥಿತಿಯಲ್ಲಿ ನೂರಾರು ಮಕ್ಕಳು ಪಾಠ ಕೇಳುತ್ತಿದ್ದು, ಈ ಹಿನ್ನೆಲೆಯಲ್ಲಿ 72 ಮಕ್ಕಳಿದ್ದ ಶಾಲೆಯಲ್ಲಿ ಪ್ರಸ್ತುತ 12 ಮಕ್ಕಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ ಎಂದು ನ್ಯೂಸ್ ನಾಟೌಟ್ ವರದಿ ಮೂಲಕ ಗಮನ ಸೆಳೆದಿತ್ತು.
ಸರ್ಕಾರಿ ಶಾಲೆ ಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅನ್ನುವುದಕ್ಕೆ ಅಜ್ಜಾವರ ಗ್ರಾಮದ ದೊಡ್ಡೇರಿ ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ ಪ್ರತ್ಯಕ್ಷ ಉದಾಹರಣೆ. ಸದ್ಯ ಶಾಲೆಯ ಸುತ್ತ ಒಂದು ನೋಟ ಹಾಕಿದರೆ ಅಲ್ಲಲ್ಲಿ ಕಂಬ ಕೊಟ್ಟು ನಿಲ್ಲಿಸಿದ ದೃಶ್ಯ ಕಾಣುತ್ತದೆ. ನಾವು ದನದ ಕೊಟ್ಟಿಗೆಗೆ, ಬಾಳೆ ಗೊನೆಗೆ ಆಧಾರವಾಗಿ ಕಂಬ ಕೊಡುವುದನ್ನು ನೋಡಿದ್ದೇವೆ.
ಆದರೆ ಇಟ್ಟಿಗೆ ಕಲ್ಲುಗಳಿಂದ ಕಟ್ಟಿದ ಶಾಲೆಗೆ ಕಂಬ ಕೊಡುವುದನ್ನು ಇತಿಹಾಸದಲ್ಲಿ ಮೊದಲ ಬಾರಿಗೆ ನೋಡಿದ ಅನುಭವ ಆಗುತ್ತದೆ. ಇಂತಹ ಶಾಲೆಯಲ್ಲಿ ಯಾವ ಮಕ್ಕಳನ್ನು ಕಳುಹಿಸಲು ಪೋಷಕರು ಇಷ್ಟಪಡುತ್ತಾರೆ ಹೇಳಿ. ಅಂತಹ ಸ್ಥಿತಿಯಲ್ಲಿರುವ ಅಜ್ಜಾವರ ದೊಡ್ಡೇರಿ ಶಾಲೆಗೆ ಈಗ ಅಡಿಗೆಯ ಕೋಣೆಯಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂಬ ವಾಸ್ತವಿಕ ಸತ್ಯವನ್ನು ನ್ಯೂಸ್ ನಾಟೌಟ್ ವರದಿಯಲ್ಲಿ ಬಹಿರಂಗ ಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ರವರು ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿ ಮೇಲ್ಚಾವಣಿಯನ್ನು ಇಂದು(ಆಗಸ್ಟ್ ೧೭) ಪರಿಶೀಲಿಸಿದ್ದು, ಜೊತೆಗೆ ಇಂಜಿನಿಯರ್ ಮಣಿಕಂಠ,
ಬಿ.ಈ. ಓ. ರಮೇಶ್ ಇವರಿಗೆ ಈ ಕಟ್ಟಡವನ್ನು ಆದಷ್ಟು ಬೇಗ ಕೆಡವಿ ಹೊಸ ಕಟ್ಟಡ ನಿರ್ಮಿಸಿಕೊಡಬೇಕು. ಟೆಂಡರ್ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಮುಗಿಸಿ ಕೊಟ್ಟು ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದಾರೆ.
ಈ ಹಿಂದಿನ ಸರಕಾರದ ಅವಧಿಯಲ್ಲಿ ಶಾಸಕ ಎಸ್. ಅಂಗಾರರ ಮುತುವರ್ಜಿಯಲ್ಲಿ ಮಳೆಹಾನಿ ಪರಿಹಾರ ನಿಧಿಯಲ್ಲಿ ಸುಮಾರು 7 ಲಕ್ಷ ರೂಪಾಯಿಗಳಲ್ಲಿ ದುರಸ್ತಿ ಮಾಡಲು ಹಣ ಮಂಜೂರಾಗಿತ್ತು. ಎಂಜಿನಿಯರಿಂಗ್ ವಿಭಾಗಕ್ಕೆ ಹಣವೂ ಬಂದಿತ್ತು. ಆ ಹಣ ವಾಪಸ್ ಹೋಗಬಾರದು ಎಂಬ ಕಾರಣಕ್ಕೆ ಅಜ್ಜಾವರ ಪಂಚಾಯತ್ ಗೆ ವರ್ಗಾವಣೆ ಮಾಡಿದ್ದರು.ಸಿಎಂ ಸಿದ್ದರಾಮಯ್ಯರ ಸರಕಾರದ ಆದೇಶದನ್ವಯ ಹೊಸ ಕಾಮಗಾರಿಗಳು ಮಾಡಬಾರದು ಎಂಬ ಹಿನ್ನಲೆಯಲ್ಲಿ ಈ ಅನುದಾನವನ್ನು ಹಿಂದಕ್ಕೆ ಪಡೆಯಲಾಯಿತು. ಹೀಗಾಗಿ ಕಟ್ಟಡ ನಿರ್ಮಾಣದ ಯೋಜನೆ ನೆನೆಗುದಿಗೆ ಬಿದ್ದಿದೆ.
ಇದರಿಂದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಈಗ ನಿತ್ಯ ಸಂಕಟ ಅನುಭವಿಸುವಂತಾಗಿದೆ. ಈಗ ಶಾಸಕಿ ಭೇಟಿ ನೀಡಿ ಹೊಸ ಕಟ್ಟಡ ನಿರ್ಮಾಣದ ಭರವಸೆ ನೀಡಿ, ಅಧಿಕಾರಿಗಳಿಗೆ ಸೂಚಿಸಿರುವುದು ಶಿಕ್ಷಕರಿಗೆ ಮತ್ತು ಮಕ್ಕಳ ಪೋಷಕರಿಗೆ ಆಶಾಕಿರಣ ಮೂಡಿದಂತಾಗಿದೆ. ಆದಷ್ಟು ಬೇಗ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಗೊಂಡು ಊರಿನ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಮೂಲ ಸೌಖರ್ಯ ಸಿಗುವಂತಾಗಲಿ ಎಂಬುದು ನ್ಯೂಸ್ ನಾಟೌಟ್ ನ ಕಳಕಳಿ.
ಶಾಸಕಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹೇಶ್ ಕುಮಾರ್ ಮೇನಾಲ, ಕಿರಣ್ ಅಟ್ಲೂರು, ಪ್ರಭೂದ್ ಶೆಟ್ಟಿ ಮೇನಾಲ, ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸತ್ಯವತಿ ಬಸವನಪಾದೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರೇವತಿ ದೊಡ್ಡೇರಿ, ಹರ್ಷಿತ್ ದೊಡ್ಡೇರಿ, ಎಸ್. ಡಿ. ಎಂ. ಸಿ. ಸದಸ್ಯರುಗಳು, ಊರಿನವರು ವಿದ್ಯಾ ಅಭಿಮಾನಿಗಳು ಮತ್ತು ಅಧ್ಯಾಪಕ ವೃಂದ ಉಪಸ್ಥಿತರಿದ್ದರು.